ನವದೆಹಲಿ: ಪರಮಾಣು ಶಸ್ತ್ರಾಸ್ತ್ರಗಳಂತೆ ಕೃತಕ ಬುದ್ಧಿಮತ್ತೆಯಿಂದ (ಎಐ) ಜಗತ್ತಿಗೆ ಅಪಾಯ ಎದುರಾಗಬಹುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಆತಂಕ ವ್ಯಕ್ತಡಿಸಿದ್ದಾರೆ.
ಎಐ ಕುರಿತು ಆತಂಕ: ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋತ್ ಮತ್ತು ಹಣಕಾಸು ಸಚಿವಾಲಯ ಆಯೋಜಿಸಿದ್ದ ಕೌಟಿಲ್ಯ ಎಕನಾಮಿಕ್ ಕಾನ್‌ಕ್ಲೇವ್‌ನ ಮೂರನೇ ಮತ್ತು ಅಂತಿಮ ದಿನದ ಮೂರನೇ ಎಡಿಷನ್ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಎಐ ಕುರಿತು ತೀವ್ರ ಚರ್ಚೆ ಏರ್ಪಡಲಿದ್ದು, ಇದರ ಪರಿಣಾಮಗಳನ್ನು ಎದುರಿಸಲು ಎಲ್ಲ ರಾಷ್ಟ್ರಗಳು ಸಿದ್ಧರಾಗಿರಬೇಕೆಂದು ಹೇಳಿದರು.
ಒಂದು ಕಾಲದಲ್ಲಿ ನಾವು ಪರಮಾಣು ಬಾಂಬ್ಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದೆವು. ಆದರೀಗ ಮುಂದಿನ ದಿನಗಳಲ್ಲಿ ಎಐ ಕುರಿತು ನಾವು ಚಿಂತಿತರಾಗಬೇಕಾಗಲಿದೆ. ಜನಸಂಖ್ಯಾಶಾಸ್ತ್ರ, ಸಂಪರ್ಕ ಮತ್ತು ಎಐ ಜಾಗತಿಕವಾಗಿ ಬದಲಾವಣೆಗೆ ಕಾರಣವಾಗಲಿದೆ ಎಂದು ಸಚಿವ ಜೈಶಂಕರ್ ಕಳವಳ ವ್ಯಕ್ತಪಡಿಸಿದರು.
ಮುಂದಿನ ದಶಕದಲ್ಲಿ ಜಾಗತೀಕರಣವು ಅಸ್ತ್ರವಾಗಬಹುದು. ಜಗತ್ತು ಅದರ ಬಗ್ಗೆ ಜಾಗರೂಕರಾಗಿರಬೇಕು. ಎಐ ಕ್ರಾಂತಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ನಷ್ಟ ಮತ್ತು ಇತರ ನಕಾರಾತ್ಮಕ ಪರಿಣಾಮಗಳಿಗೆ ಪ್ರಪಂಚದಾದ್ಯಂತದ ದೂಷಣೆಗೊಳಗಾಗಬಹುದು. ಬದಲಾವಣೆ (ಜಾಗತೀಕರಣ) ಇರುವವರೆಗೂ ಈ ಸಮಸ್ಯೆ ಹಾಗೆಯೇ ಇರಲಿದೆ. ಕಳೆದ ದಶಕದಲ್ಲಿ ಜಾಗತೀಕರಣದ ಸಾಮಾಜಿಕ ಮತ್ತು ರಾಜಕೀಯ ಪ್ರತಿಕ್ರಿಯೆಯು ವೇಗ ಪಡೆದುಕೊಂಡಿದೆ. ಜಾಗತೀಕರಣದ ವಾಸ್ತವಗಳು ಅನಿವಾರ್ಯವಾಗಿ ರಕ್ಷಣಾ ನೀತಿಯೊಂದಿಗೆ ಘರ್ಷಣೆ ಉಂಟುಮಾಡಲಿದೆ ಎಂದು ವಿದೇಶಾಂಗ ಸಚಿವರು ಆತಂಕ ವ್ಯಕ್ತಪಡಿಸಿದರು.
ವಿಶ್ವಸಂಸ್ಥೆ ಬಗ್ಗೆ ಅಸಮಾಧಾನ: ಇಂದಿನ ಯುಗದಲ್ಲಿ ವಿಶ್ವಸಂಸ್ಥೆಯ ಪಾತ್ರ ಕೇವಲ ಪ್ರೇಕ್ಷಕನಂತಾಗಿದೆ. ವ್ಯಾಪಾರ ಜಗತ್ತಿನೊಂದಿಗೆ ಹೋಲಿಕೆ ಮಾಡುತ್ತ, ವಿಶ್ವಸಂಸ್ಥೆಯು ಹಳೆಯ ವ್ಯವಹಾರದಂತೆ ಆಗಿದೆ. ಆದರೆ ಜಗತ್ತಿಗೆ ಅನುಗುಣವಾಗಿ ಬದಲಾವಣೆ ಕಾಣುತ್ತಿಲ್ಲ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.
ಯುದ್ಧದ ಬಗ್ಗೆ ಹೇಳಿದ್ದು ಹೀಗೆ: ಮಧ್ಯಪ್ರಾಚ್ಯ ಸಂಘರ್ಷದ ಕುರಿತು ಮಾತನಾಡಿದ ಅವರು, ಇಂದು ಆರ್ಥಿಕ ಕಾರಿಡಾರ್‌ಗಳು, ಭೂಮಿ ಮತ್ತು ಸಮುದ್ರಕ್ಕಾಗಿ ಮಾತ್ರ ಪೈಪೋಟಿ ನಡೆಯುತ್ತಿದೆ. ಆದರೆ ಭವಿಷ್ಯದಲ್ಲಿ ಹವಾಮಾನ ಬದಲಾವಣೆಯ ಬಗ್ಗೆಯೂ ಹೋರಾಟಗಳು ನಡೆಯಲಿವೆ. ಈ ಭೌಗೋಳಿಕ ರಾಜಕೀಯ ಉದ್ವಿಗ್ನತೆಯು ಇತರರಿಗಿಂತ ಹೆಚ್ಚಾಗಿ ಪರಿಣಾಮ ಗ್ಲೋಬಲ್ ಸೌತ್ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಇದು ಕಳವಳಕಾರಿಯಾದುದು ಎಂದು ಜೈಶಂಕರ್ ತಿಳಿಸಿದರು.