ಶಿಮ್ಲಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರೆದಿದೆ. ಇದರ ನಡುವೆ ಇಂದಿರಾ ಗಾಂಧಿ ಪ್ಯಾರಿ ಬೆಹ್ನಾ ಸುಖ್ ಸಮ್ಮಾನ್ ನಿಧಿ ಯೋಜನೆ ಚರ್ಚೆ ಗ್ರಾಸವಾಗಿದೆ. ಮಾರ್ಚ್ 4ರಂದು ಸಿಎಂ ಸುಖ್ವಿಂದರ್ ಸಿಂಗ್ ಸುಖು ಈ ಯೋಜನೆಯಡಿ ರಾಜ್ಯಾದ್ಯಂತ ಮಹಿಳೆಯರಿಗೆ ಪ್ರತಿ ತಿಂಗಳು 1,500 ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದರು. ಅದೇ ದಿನದಿಂದ ಬಿಜೆಪಿ ಈ ಯೋಜನೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಎತ್ತುತ್ತಿದೆ.
ಹಿಮಾಚಲ ಪ್ರದೇಶದಲ್ಲಿ ಲೋಕಸಭೆ ಚುನಾವಣೆ ಜೊತೆಗೆ ಆರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಕಾಂಗ್ರೆಸ್ ಶಾಸಕರು ತಮ್ಮದೇ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿ ವಿರುದ್ಧ ಮತ ಹಾಕುವ ಮೂಲಕ ಬಂಡಾಯದ ಬಾವುಟ ಹಾರಿಸಿದ ಪರಿಣಾಮ ಆರು ಶಾಸಕರ ಸದಸ್ಯತ್ವ ರದ್ದು ಮಾಡಲಾಗಿದೆ. ಇದರಿಂದ ಈ ಆರು ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಪ್ರಕಟಿಸಲಾಗಿದೆ. ಕಾಂಗ್ರೆಸ್‌ನ ಬಂಡಾಯ ಶಾಸಕರೊಂದಿಗೆ ಮೂವರು ಪಕ್ಷೇತರ ಶಾಸಕರು ಸೇರಿ ಒಟ್ಟು 9 ಜನರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಮತ್ತೊಂದೆಡೆ, ಮಹಿಳೆಯರಿಗೆ ಪ್ರತಿ ತಿಂಗಳು 1,500 ರೂಪಾಯಿ ಆರ್ಥಿಕ ನೆರವು ಕಲ್ಪಿಸುವ ಇಂದಿರಾ ಗಾಂಧಿ ಪ್ಯಾರಿ ಬೆಹ್ನಾ ಸುಖ್ ಸಮ್ಮಾನ್ ನಿಧಿ ಯೋಜನೆ ಜಾರಿ ಬಗ್ಗೆ ಘೋಷಿಸಿದ ಸರ್ಕಾರಕ್ಕೆ ಹಿನ್ನಡೆ ಉಂಟಾಗಿದೆ. ಬಡ ಮಹಿಳೆಯರಿಗೆ 1,500 ರೂಪಾಯಿ ನೀಡುವ ಯೋಜನೆಗೆ ಸಂಬಂಧಿಸಿದಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂದು ಆರೋಪಿಸಲಾಗಿದೆ. ಇದರಿಂದ ಇದೀಗ ರಾಜ್ಯಾದ್ಯಂತ ಈ ಯೋಜನೆಯಡಿ ಅರ್ಜಿಗಳ ಸ್ವೀಕಾರ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ.
ಬಡ ಮಹಿಳೆಯರಿಗೆ ನೆರವು ಕಲ್ಪಿಸುವ ಯೋಜನೆ ಕುರಿತು ದೂರು ನೀಡಿರುವ ಬಿಜೆಪಿಯ ನಡೆಯನ್ನೇ ಕಾಂಗ್ರೆಸ್ ದೊಡ್ಡ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಮುಂದಾಗಿದೆ. ಲೋಕಸಭೆ ಚುನಾವಣೆ, ವಿಧಾನಸಭೆಯ ಉಪಚುನಾವಣೆಗಳಲ್ಲಿ ಬಿಜೆಪಿಯನ್ನು ಮಹಿಳಾ ವಿರೋಧಿ ಎಂದು ಬಿಂಬಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ರಾಜ್ಯದ ಲಕ್ಷಾಂತರ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದ ನನ್ನೊಂದಿಗಿರುವುದರಿಂದ ನನ್ನ ಕೆಲಸವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ನಮ್ಮ ತಾಯಂದಿರು ಮತ್ತು ಸಹೋದರಿಯರ ಹಿತದೃಷ್ಟಿಯಿಂದ ಕೆಲಸ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಪ್ರತಿಪಕ್ಷಗಳು ಎಷ್ಟೇ ನಕಾರಾತ್ಮಕ ರಾಜಕೀಯ ಮಾಡಿದರೂ ಮಹಿಳೆಯರ ಪರವಾಗಿ ನಾವು ಮಾಡುವ ಕೆಲಸವನ್ನು ಮಾಡುತ್ತೇವೆ ಎಂದು ಸಿಎಂ ಸುಖ್ವಿಂದರ್ ಸಿಂಗ್ ಸುಖು ತಮ್ಮ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
2022ರಲ್ಲಿ ಹಿಮಾಚಲ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ 10 ಗ್ಯಾರಂಟಿಗಳನ್ನು ನೀಡಲಾಗಿತ್ತು. 18 ವರ್ಷದಿಂದ 59 ವರ್ಷದೊಳಗಿನ ಮಹಿಳೆಯರಿಗೆ ಪ್ರತಿ ತಿಂಗಳು 1,500 ರೂಪಾಯಿ ನೀಡುವ ಭರವಸೆ ಕೊಡಲಾಗಿತ್ತು. ಕಾಂಗ್ರೆಸ್‌ನ ಕೇಂದ್ರ ನಾಯಕರಿಂದ ಹಿಡಿದು ರಾಜ್ಯ ನಾಯಕರು ಸಹ ಚುನಾವಣಾ ವೇದಿಕೆಗಳಲ್ಲಿ ಈ ಗ್ಯಾರಂಟಿಗಳ ಬಗ್ಗೆ ಸಾಕಷ್ಟು ಪ್ರಸ್ತಾಪಿಸಿದ್ದರು. ಡಿಸೆಂಬರ್ನಲ್ಲಿ ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಮಹಿಳೆಯರ 1,500 ರೂಪಾಯಿಗಳ ಗ್ಯಾರಂಟಿ ಈಡೇರಿಸಲು ಉಪ ಸಮಿತಿಯನ್ನೂ ರಚಿಸಲಾಗಿತ್ತು. ಈ ಯೋಜನೆಯನ್ನು 2024ರ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಜಾರಿ ಮಾಡಲು ಉದ್ದೇಶಿಸಲಾಗಿತ್ತು. ಮಾರ್ಚ್ 13ರಂದು ಯೋಜನೆ ಕುರಿತು ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಆದರೆ, ಅಷ್ಟರಲ್ಲೇ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ತೊಡಕು ಉಂಟಾಗಿದೆ.
ಇದನ್ನೂ ಓದಿ:'ಕ್ರಿಮಿನಲ್ ಮನ ಪರಿವರ್ತನೆ': ತನ್ನ ಚರ್ಮದಿಂದ ಪಾದರಕ್ಷೆ ಮಾಡಿಸಿ ತಾಯಿಗೆ ಅರ್ಪಿಸಿದ ಮಗ