ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಾಳೆ (ಏಪ್ರಿಲ್ 29) ಗುಜರಾತ್ ಮತ್ತು ಛತ್ತೀಸ್‌ಗಢ ಪ್ರವಾಸ ಕೈಗೊಳ್ಳಲಿದ್ದಾರೆ. ಗುಜರಾತ್ ಪಟಾನ್ ಮತ್ತು ಛತ್ತೀಸ್‌ಗಢದ ಬಿಲಾಸ್‌ಪುರ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
ಏಪ್ರಿಲ್ 29ರಂದು ಪಟಾನ್‌ನಲ್ಲಿ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಶಕ್ತಿ ಸಿನ್ಹಾ ಗೋಹಿಲ್ 'ಈಟಿವಿ ಭಾರತ್'ಗೆ ತಿಳಿಸಿದರು. ಪಟಾನ್ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದ ಭರತ್‌ಸಿಂಗ್‌ಜಿ ದಾಭಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಂದನ್‌ಜಿ ಠಾಕೂರ್ ಕಣಕ್ಕಿಳಿದಿದ್ದಾರೆ.
ಬಿಜೆಪಿ ವಿರುದ್ಧ ಸಿಡಿದೆದ್ದ ರಜಪೂತರು: 2019ರ ಚುನಾವಣೆಯಲ್ಲಿ ಗುಜರಾತ್‌ನ ಎಲ್ಲ 26 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಖಾತೆ ತೆರೆಯುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು. ಈ ಬಾರಿ ಕೇಂದ್ರ ಸಚಿವ, ಬಿಜೆಪಿಯ ರಾಜ್‌ಕೋಟ್ ಅಭ್ಯರ್ಥಿ ಪರಶೋತ್ತಮ್ ರೂಪಾಲಾ ವಿವಾದಾತ್ಮಕ ಹೇಳಿಕೆಯಿಂದ ಬಿಜೆಪಿ ವಿರುದ್ಧ ರಜಪೂತ ಸಮುದಾಯ ಸಾಕಷ್ಟು ಆಕ್ರೋಶಗೊಂಡಿದೆ. ಕಳೆದ ಕೆಲ ವಾರಗಳಿಂದ ರಾಜ್ಯಾದ್ಯಂತ ಸಮುದಾಯದ ಪ್ರತಿಭಟನೆಗಳು ನಡೆಯುತ್ತಿವೆ. ಇದು ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆಯೂ ದಟ್ಟವಾಗಿದೆ. ಇದರ ಹೊತ್ತಲ್ಲೇ ರಾಹುಲ್ ಗಾಂಧಿ ಗುಜರಾತ್ನಲ್ಲಿ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಇದರ ಲಾಭ ಗಳಿಸುವ ವಿಶ್ವಾಸ ಸಹ ಕಾಂಗ್ರೆಸ್ನಲ್ಲಿ ಮೂಡಿದೆ.
ರಜಪೂತರು ಜನಸಂಖ್ಯೆಯ ಕೇವಲ ಶೇ.4-5ರಷ್ಟು ಇರಬಹುದು. ಆದರೆ, ಪ್ರಭಾವಿ ಎಂದು ಪರಿಗಣಿಸಲಾಗಿದೆ. ಸದ್ಯ ಪರಿಸ್ಥಿತಿಯಲ್ಲಿ ಸಂಪೂರ್ಣವಾಗಿ ಬಿಜೆಪಿ ವಿರುದ್ಧವಾಗಿ ನಿಂತಿದ್ದಾರೆ. ಪರಶೋತ್ತಮ್ ರೂಪಾಲಾ ಪದೇ ಪದೇ ಕ್ಷಮೆಯಾಚಿಸುತ್ತಿದ್ದರೂ, ಸಮುದಾಯದ ಸಿಟ್ಟು ಮಾತ್ರ ಕಡಿಮೆ ಆಗುತ್ತಿಲ್ಲ. ರಾಜ್ಯ ಸರ್ಕಾರವು ಆರಂಭದಲ್ಲಿ ರಜಪೂತ ಸಮುದಾಯ ಅಹಮದಾಬಾದ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗಳ ಮೇಲೆ ನಿರ್ಬಂಧ ಹೇರಿತ್ತು. ಆಗ ಸಮುದಾಯದ ಸದಸ್ಯರು ತಮ್ಮ ತೋಳುಗಳಲ್ಲಿ ಕಪ್ಪು ಪಟ್ಟಿಗಳನ್ನು ಧರಿಸಲು ಯೋಜಿಸಿದ್ದರು. ನಂತರ ಕೇಸರಿ ಪಟ್ಟಿಗಳನ್ನು ಧರಿಸಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದರು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಜಗದೀಶ್ ಠಾಕೂರ್ ಹೇಳಿದರು.
ರಾಜ್‌ಕೋಟ್‌ನಲ್ಲಿ ಹಲವಾರು ರಜಪೂತ ಸಂಘಟನೆಗಳು ಕಾಂಗ್ರೆಸ್ ಅಭ್ಯರ್ಥಿ ಪರೇಶ್ ಧನಾನಿ ಅವರನ್ನು ಕುದುರೆ ಸವಾರಿ ಮೂಲಕ ಸ್ವಾಗತಿಸಿದರೆ, ಇತರ ಹಲವಾರು ಕ್ಷೇತ್ರಗಳಲ್ಲಿ ಸಮುದಾಯದ ಕಾರ್ಯಕರ್ತರು ಕೇಸರಿ ಪಕ್ಷದ ವಿರುದ್ಧ ಮತ ಚಲಾಯಿಸಲು ಪ್ರತಿಜ್ಞೆಯನ್ನೂ ಮಾಡಿದ್ದಾರೆ. ರಾಜ್ಯ ಘಟಕದ ಉಸ್ತುವಾರಿ ಗೋಹಿಲ್ ಮಾತನಾಡಿ, ರಜಪೂತರು ಮಾತ್ರವಲ್ಲ, ಹಲವಾರು ಇತರ ಸಮುದಾಯಗಳು ಸಹ ಬಿಜೆಪಿ ವಿರುದ್ಧ ಕೋಪಗೊಂಡಿವೆ. ಈ ಬಾರಿ ಆಡಳಿತ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿವೆ ಎಂದರು.