ಕರ್ನಾಟಕ

karnataka

ETV Bharat / bharat

ಮತದಾರನ ಮೇಲೆ ಮತಕೇಂದ್ರದಲ್ಲೇ ವೈಎಸ್​ಆರ್​ಸಿಪಿ ಅಭ್ಯರ್ಥಿಯಿಂದ ಮಾರಣಾಂತಿಕ ದಾಳಿ: ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ - Lok Sabha Election 2024 - LOK SABHA ELECTION 2024

ಲೋಕಸಭೆ ಚುನಾವಣೆ 4ನೇ ಹಂತದ ಮತದಾನ
ಲೋಕಸಭೆ ಚುನಾವಣೆ 4ನೇ ಹಂತದ ಮತದಾನ

By ETV Bharat Karnataka Team

Published : May 13, 2024, 7:27 AM IST

Updated : May 13, 2024, 12:51 PM IST

12:45 May 13

ಆಂಧ್ರಪ್ರದೇಶ, ಒಡಿಶಾ ವಿಧಾನಸಭೆ ಚುನಾವಣೆ ಮತಪ್ರಮಾಣ

  • ಆಂಧ್ರಪ್ರದೇಶ ವಿಧಾನಸಭೆಯ 175 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬೆಳಗ್ಗೆ 11 ಗಂಟೆವರೆಗೆ ಶೇ.23 ರಷ್ಟು ಮತದಾನವಾಗಿದೆ. ಒಡಿಶಾದ 8 ವಿಧಾನಸಭಾ ಕ್ಷೇತ್ರಗಳ ಮೊದಲ ಹಂತದ ಚುನಾವಣೆಯಲ್ಲಿ ಶೇಕಡಾ 23.28 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

12:19 May 13

ಮತಕೇಂದ್ರದಲ್ಲಿ ಮತದಾರನ ಮೇಲೆ ವೈಎಸ್​​ಆರ್​ಸಿಪಿ ಅಭ್ಯರ್ಥಿ ಹಲ್ಲೆ

ಮತಕೇಂದ್ರದಲ್ಲಿ ಮತದಾರನ ಮೇಲೆ ವೈಎಸ್​​ಆರ್​ಸಿಪಿ ಅಭ್ಯರ್ಥಿ ಹಲ್ಲೆ
  • ಆಂಧ್ರಪ್ರದೇಶದ ತೆನಾಲಿಯಲ್ಲಿ ಮತದಾರನ ಮೇಲೆ ವೈಎಸ್​​ಆರ್​ಸಿಪಿ ಅಭ್ಯರ್ಥಿಯೊಬ್ಬರು ಹಲ್ಲೆ ಮಾಡಿದ್ದಾರೆ. ಮತಕೇಂದ್ರದಲ್ಲಿ ಸರತಿ ಸಾಲಿನಲ್ಲಿ ಬರಲು ಹೇಳಿದ್ದಕ್ಕೆ ಕಪಾಳಕ್ಕೆ ಬಾರಿಸಿದ್ದಾರೆ. ಪ್ರತಿಯಾಗಿ ಮತದಾರ ಕೂಡ ಹಾಲಿ ಶಾಸಕನಿಗೆ ಹೊಡೆದಿದ್ದಾನೆ. ಬಳಿಕ ಶಾಸಕನ ಆಪ್ತರು ಒಟ್ಟುಗೂಡಿ ಮತದಾರನ ಮೇಲೆ ಮಾರಣಾಂತಿಕ ದಾಳಿ ಮಾಡಿದ್ದಾರೆ. ಇದು ಪೊಲೀಸರ ಸಮ್ಮುಖದಲ್ಲೇ ನಡೆದಿದೆ.

11:38 May 13

ತೆಲಂಗಾಣ ಸಿಎಂ ರೇವಂತ್​ ರೆಡ್ಡಿ ಮತದಾನ

  • ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಕುಟುಂಬ ಸಮೇತರಾಗಿ ಮಹಬೂಬ್‌ನಗರ ಕ್ಷೇತ್ರದ ಕೊಡಂಗಲ್‌ನಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು.

11:32 May 13

ಬೆಳಗ್ಗೆ 11 ಗಂಟೆಯವರೆಗಿನ ಮತ ಪ್ರಮಾಣದ ವಿವರ

  • 10 ರಾಜ್ಯಗಳ 96 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ಮತ್ತಷ್ಟು ಬಿರುಸುಗೊಂಡಿದೆ. ಬೆಳಗ್ಗೆ 11 ಗಂಟೆಯವರೆಗೆ ಶೇ.24.87 ರಷ್ಟು ಮತದಾನವಾಗಿದೆ. ರಾಜ್ಯವಾರು ಮಾಹಿತಿ ಹೀಗಿದೆ.
  1. ಆಂಧ್ರಪ್ರದೇಶ- ಶೇ.23.10
  2. ಬಿಹಾರ- ಶೇ. 22.54
  3. ಜಮ್ಮು ಮತ್ತು ಕಾಶ್ಮೀರ- ಶೇ. 14.94
  4. ಜಾರ್ಖಂಡ್​- ಶೇ. 27.40
  5. ಮಧ್ಯಪ್ರದೇಶ- ಶೇ. 32.28
  6. ಮಹಾರಾಷ್ಟ್ರ- ಶೇ. 17.51
  7. ಒಡಿಶಾ- ಶೇ. 23.28
  8. ತೆಲಂಗಾಣ- ಶೇ. 24.31
  9. ಉತ್ತರಪ್ರದೇಶ- ಶೇ. 27.12
  10. ಪಶ್ಚಿಮಬಂಗಾಳ- ಶೇ. 32.78

11:28 May 13

ಹೈದರಾಬಾದ್​ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಮತದಾರರು ಡಿಲೀಟ್​ ಆರೋಪ

  • ಹೈದರಾಬಾದ್​ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಮಾಧವಿ ಲತಾ ಅವರು ಅಜಂಪುರದ ಮತಗಟ್ಟೆ ಸಂಖ್ಯೆ 122 ಕ್ಕೆ ಭೇಟಿ ನೀಡಿ, ಮತದಾರರ ಪಟ್ಟಿಯಲ್ಲಿರುವ ಲೋಪಗಳ ಬಗ್ಗೆ ಧ್ವನಿ ಎತ್ತಿದರು. ಹಲವಾರು ಮತದಾರರ ಹೆಸರುಗಳನ್ನು ಅಳಿಸಲಾಗಿದೆ. ನಕಲಿ ವೋಟಿಂಗ್​ಗೆ ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.

11:16 May 13

ಮತ ಹಾಕಿ ಜವಾಬ್ದಾರಿ ಮೆರೆಯೋಣ: ಬಿಆರ್‌ಎಸ್ ನಾಯಕ ಕೆಟಿ ರಾಮರಾವ್

  • ಬಿಆರ್‌ಎಸ್ ನಾಯಕ, ಮಾಜಿ ಮಂತ್ರಿ ಕೆಟಿ ರಾಮರಾವ್ ಅವರು ಹೈದರಾಬಾದ್‌ನ ಮತಗಟ್ಟೆಯಲ್ಲಿ ಕುಟುಂಬ ಸಮೇತ ಬಂದು ಮತ ಚಲಾಯಿಸಿದರು. ಬಳಿಕ ಮಾತನಾಡಿ, ಎಲ್ಲರೂ ಹೊರಬಂದು ಮತದಾನ ಮಾಡಿ. ವೋಟ್​ ಹಾಕುವ ಮೂಲಕ ನಾವು ಜವಾಬ್ದಾರಿಯುತ ನಾಗರಿಕರು ಎಂದು ಗುರುತಿಸಿಕೊಳ್ಳೋಣ. ಅಭಿವೃದ್ಧಿ, ದೂರದೃಷ್ಟಿಯುಳ್ಳ ನಾಯಕರಿಗೆ ಮತ ಹಾಕೋಣ ಎಂದರು.

10:53 May 13

ಜಾರ್ಖಂಡ್ ಲೋಕಸಭೆ ಕ್ಷೇತ್ರಗಳಲ್ಲಿ ಶೇ.11.78 ರಷ್ಟು ಮತದಾನ

  • ಜಾರ್ಖಂಡ್‌ನ ಸಿಂಗ್‌ಭೂಮ್, ಲೋಹರ್ದಗಾ, ಖುಂಟಿ ಮತ್ತು ಪಲಮು ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಸುಮಾರು 12 ಪ್ರತಿಶತದಷ್ಟು ಮತದಾನವಾಗಿದೆ. ಮಾವೋವಾದಿ ಪೀಡಿತ ಸಿಂಗ್‌ಭೂಮ್ ಕ್ಷೇತ್ರದಲ್ಲಿ ಶೇ.12.67 ರಷ್ಟು ಮತದಾನವಾಗಿದ್ದರೆ, ಖುಂಟಿ, ಲೋಹರ್ಡಗಾ ಮತ್ತು ಪಲಮು ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ.12.20, ಸುಮಾರು ಶೇ.10.97 ಮತ್ತು ಶೇ. 11.47ರಷ್ಟು ಮತದಾನವಾಗಿದೆ.

10:46 May 13

ಆಂಧ್ರಪ್ರದೇಶ ವಿಧಾನಸಭೆಗೆ ಶೇ.9.21, ಲೋಕಸಭೆಗೆ ಶೇ.9.05 ರಷ್ಟು ಮತದಾನ

  • ಆಂಧ್ರಪ್ರದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಏಕಕಾಲದಲ್ಲಿ ಮತದಾನ ನಡೆಯುತ್ತಿದೆ. ರಾಜ್ಯದ 25 ಲೋಕಸಭಾ ಸ್ಥಾನಗಳಿಗೆ ಬೆಳಗ್ಗೆ 9 ಗಂಟೆವರೆಗೆ ಶೇ.9.05ರಷ್ಟು ಮತದಾನವಾಗಿದ್ದರೆ, 175 ಸ್ಥಾನಗಳ ವಿಧಾನಸಭೆಗೆ ಶೇ.9.21ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

10:24 May 13

ಪಶ್ಚಿಮಬಂಗಾಳದಲ್ಲಿ ಬಿಜೆಪಿ- ಟಿಎಂಸಿ ನಡುವೆ ಕಿತ್ತಾಟ, ಟೆಂಟ್​ ಧ್ವಂಸ

  • ಪಶ್ಚಿಮ ಬಂಗಾಳದ ಬಿರ್ಭೂಮ್​ನಲ್ಲಿನ ಮತದಾನ ಕೇಂದ್ರದ ಬಳಿಯ ತಮ್ಮ ಟೆಂಟ್​ ಅನ್ನು ಟಿಎಂಸಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಇನ್ನೊಂದೆಡೆ, ದುರ್ಗಾಪುರದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

10:11 May 13

ಕಾಂಗ್ರೆಸ್​ ಅಭ್ಯರ್ಥಿ ವೈಎಸ್​ ಶರ್ಮಿಳಾ ಮತದಾನ

  • ಆಂಧ್ರಪ್ರದೇಶದ ಕಾಂಗ್ರೆಸ್ ಅಧ್ಯಕ್ಷೆ ಮತ್ತು ಕಡಪಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವೈಎಸ್ ಶರ್ಮಿಳಾ ಅವರು ಇಲ್ಲಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಟಿಡಿಪಿಯ ಚಡಿಪಿರಲ್ಲಾ ಭೂಪೇಶ್ ಸುಬ್ಬರಾಮಿ ರೆಡ್ಡಿ ಮತ್ತು ವೈಎಸ್‌ಆರ್‌ಸಿಪಿಯ ವೈಎಸ್ ಅವಿನಾಶ್ ರೆಡ್ಡಿ ಅವರಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ.

10:03 May 13

ಇನ್ನೂ ಆರಂಭವಾಗದ ಮತದಾನ, ಪೋಲಿಂಗ್​ ಏಜೆಂಟರ ಅಪಹರಣ

  • ಆಂಧ್ರಪ್ರದೇಶದ ವಿಶಾಖಪಟ್ಟಣ ಪೂರ್ವ ಕ್ಷೇತ್ರದ 95ನೇ ಮತಗಟ್ಟೆ ಕೇಂದ್ರದಲ್ಲಿ ಬೆಳಗ್ಗೆ 10 ಗಂಟೆ ಕಳೆದರೂ ಇನ್ನೂ ಮತದಾನ ಆರಂಭವಾಗಿಲ್ಲ. ಇದರಿಂದಾಗಿ ಮತದಾರರು ಕೇಂದ್ರದ ಮುಂದೆ ಮೂರು ಗಂಟೆಯಿಂದ ಕಾದು ಕುಳಿತಿದ್ದಾರೆ. ಇತ್ತ, ಅನ್ನಮಯ ಜಿಲ್ಲೆಯಲ್ಲಿ ಜನಸೇನಾ ಪೋಲಿಂಗ್​ ಏಜೆಂಟರನ್ನು ಅಪಹರಣ ಮಾಡಲಾಗಿದೆ. ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಬಲವಂತವಾಗಿ ಏಜೆಂಟರನ್ನು ಕಿಡ್ನಾಪ್​ ಮಾಡಿದ್ದಾರೆ ಎಂದು ಜನಸೇನಾ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಇದರಿಂದ ಪರಿಸ್ಥಿತಿ ಭುಗಿಲೆದ್ದು ದಳವಾಯಿ ಮತಗಟ್ಟೆ ಕೇಂದ್ರದಲ್ಲಿ ಇವಿಎಂ ಧ್ವಂಸಗೊಳಿಸಿ ಮತದಾನ ಸ್ಥಗಿತಗೊಳಿಸಲಾಗಿದೆ.

09:57 May 13

ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟಿಸಿ ಟಿಎಂಸಿ ಕಾರ್ಯಕರ್ತನ ಹತ್ಯೆ

  • ಭಾನುವಾರ ಸಂಜೆ ಪುರ್ಬಾ ಬರ್ಧಮಾನ್ ಜಿಲ್ಲೆಯ ಕೇತುಗ್ರಾಮ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾರೆ. ಮಿಂಟು ಶೇಖ್ (45) ಮೃತ ದುರ್ದೈವಿ. ಕೇತುಗ್ರಾಮ ವಿಧಾನಸಭಾ ಕ್ಷೇತ್ರದ ಚೆಂಚೂರಿ ಗ್ರಾಮದ ಬಳಿ ಕೆಲವು ಕಿಡಿಗೇಡಿಗಳು ಮನೆಗೆ ಹಿಂತಿರುಗುತ್ತಿದ್ದ ಮಿಂಟು ಶೇಖ್​​ನನ್ನು ತಡೆದು, ಹಲ್ಲೆ ಮಾಡಿದ್ದಾರೆ. ನೆಲಕ್ಕೆ ಬೀಳಿಸಿ, ಆಯುಧಗಳಿಂದ ದಾಳಿ ಮಾಡಿದ್ದಾರೆ. ಬಳಿಕ ಆತನ ಮೇಲೆ ಬಾಂಬ್ ಎಸೆದು ಸ್ಫೋಟಿಸಿದ್ದಾರೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಮಿಂಟುನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಚಿಕಿತ್ಸೆ ಫಲಿಸದೇ ಶೇಖ್ ಮೃತಪಟ್ಟಿದ್ದಾರೆ.

09:51 May 13

ಆಂಧ್ರಪ್ರದೇಶ, ಒಡಿಶಾ ವಿಧಾನಸಭೆಗೆ ಬೆಳಗ್ಗೆ 9 ಗಂಟೆವರೆಗಿನ ಮತ ಪ್ರಮಾಣ

  • ಆಂಧ್ರಪ್ರದೇಶ ವಿಧಾನಸಭೆಗೆ ಚುನಾವಣೆಯಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ ಶೇ.9.21ರಷ್ಟು ಮತದಾನವಾಗಿದೆ. ಒಡಿಶಾ ವಿಧಾನಸಭೆಗೆ ನಡೆಯುತ್ತಿರುವ ಮೊದಲ ಹಂತದ ಚುನಾವಣೆಯಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ ಶೇಕಡಾ 9.25 ರಷ್ಟು ಮತದಾನವಾಗಿದೆ.
  1. ಆಂಧ್ರಪ್ರದೇಶ ವಿಧಾನಸಭೆ- ಶೇಕಡಾ 9.21
  2. ಒಡಿಶಾ ವಿಧಾನಸಭೆ- ಶೇಕಡಾ 9.25

09:34 May 13

10 ರಾಜ್ಯಗಳಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇಕಡಾ 10.35 ರಷ್ಟು ಮತದಾನ

  • 10 ರಾಜ್ಯಗಳ 96 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ಬಿರುಸು ಪಡೆದಿದೆ. ಬೆಳಗ್ಗೆ 9 ಗಂಟೆಯವರೆಗೆ ಶೇ10.35 ರಷ್ಟು ಮತದಾನವಾಗಿದೆ. ರಾಜ್ಯವಾರು ಮಾಹಿತಿ ಹೀಗಿದೆ.
  1. ಆಂಧ್ರಪ್ರದೇಶ- ಶೇ.9.05
  2. ಬಿಹಾರ- ಶೇ. 10.18
  3. ಜಮ್ಮು ಮತ್ತು ಕಾಶ್ಮೀರ- ಶೇ.5.07
  4. ಜಾರ್ಖಂಡ್​- ಶೇ. 11.78
  5. ಮಧ್ಯಪ್ರದೇಶ- ಶೇ.14.97
  6. ಮಹಾರಾಷ್ಟ್ರ- ಶೇ.6.45
  7. ಒಡಿಶಾ- ಶೇ. 9.23
  8. ತೆಲಂಗಾಣ- ಶೇ. 9.51
  9. ಉತ್ತರಪ್ರದೇಶ- ಶೇ.11.67
  10. ಪಶ್ಚಿಮಬಂಗಾಳ- ಶೇ.15.24

09:24 May 13

ಬದಲಾವಣೆಗಾಗಿ ಮತ ಚಲಾಯಿಸಿ: ಮತದಾರರನ್ನು ಕೋರಿದ ಖರ್ಗೆ

  • ಬದಲಾವಣೆ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಮತದಾನ ಮಾಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು ಜನರಲ್ಲಿ ಕೋರಿದ್ದಾರೆ. ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದು, ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ನಮ್ಮ ಸಾಮೂಹಿಕ ಉದ್ದೇಶ ಕೇಂದ್ರೀಕರಿಸಬೇಕು. ಕಾಂಗ್ರೆಸ್ ಪಕ್ಷದ ಭರವಸೆಗಳಾದ ಯುವ ನ್ಯಾಯ, ಕಿಸಾನ್ ನ್ಯಾಯ, ನಾರಿ ನ್ಯಾಯ, ಶ್ರಮಿಕ್ ನ್ಯಾಯ ಮತ್ತು ಹಿಸ್ಸೆದಾರಿ ನ್ಯಾಯದ ಐದು ಭರವಸೆಗಳನ್ನು ಪಟ್ಟಿ ಮಾಡಿದ್ದಾರೆ.

09:16 May 13

ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಪ್ರಧಾನಿ ನರೇಂದ್ರ ಮೋದಿ ಮನವಿ

  • ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನದಲ್ಲಿ ಎಲ್ಲರೂ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ. ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಲೋಕಸಭೆ ಚುನಾವಣೆಯ ನಾಲ್ಕನೇ ಹಂತದಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ, ಯುವಕರು ಮತ್ತು ಮಹಿಳಾ ಮತದಾರರು ಉತ್ಸಾಹದಿಂದ ಭಾಗವಹಿಸುವ ವಿಶ್ವಾಸವಿದೆ. ನಮ್ಮ ಕರ್ತವ್ಯವನ್ನು ಮಾಡೋಣ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸೋಣ ಎಂದು ಅವರು ಕೋರಿದ್ದಾರೆ.

09:01 May 13

ಮತದಾನ ಮಾಡಿದ ನಟ ಪವನ್​ ಕಲ್ಯಾಣ್​

  • ಜನಸೇನಾ ಪಕ್ಷದ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶದ ಮಂಗಳಗಿರಿ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಆಂಧ್ರಪ್ರದೇಶ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯು ಏಕಕಾಲದಲ್ಲಿ ನಡೆಯುತ್ತಿದೆ.

08:51 May 13

ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಮತದಾನ

  • ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಅವರು ಉಜ್ಜಯಿನಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ರಾಜ್ಯದಲ್ಲಿ ಇದು ಕೊನೆಯ ಹಂತದ ಮತದಾನವಾಗಿದೆ. ಎಲ್ಲರೂ ತಮ್ಮ ಹಕ್ಕನ್ನು ಚಲಾಯಿಸಿ. ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನಗಳಲ್ಲಿ ಗೆದ್ದು, ಸರ್ಕಾರ ರಚನೆ ಮಾಡಲಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

08:46 May 13

ಆಂಧ್ರಪ್ರದೇಶದಲ್ಲಿ ಟಿಡಿಪಿ ಅಧಿಕಾರಕ್ಕೆ ಬರುವುದು ಖಚಿತ: ಚಂದ್ರಬಾಬು ನಾಯ್ಡು

  • ಆಂಧ್ರಪ್ರದೇಶದ ಮಾಜಿ ಸಿಎಂ ಮತ್ತು ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಗುಂಟೂರಿನ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಮತದಾನ ಮಾಡಿ ಉಜ್ವಲ ಭವಿಷ್ಯಕ್ಕಾಗಿ ಬೇಡಿಕೆ ಇಡುವುದು ನಮ್ಮ ಜವಾಬ್ದಾರಿ. ರಾಜ್ಯದಲ್ಲಿ ಟಿಡಿಪಿ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಖಚಿತ. ವಿದೇಶದಿಂದಲೂ ಬಂದು ಜನರು ಮತದಾನ ಮಾಡುತ್ತಿದ್ದಾರೆ ಇದು ಸಂತೋಷದ ವಿಚಾರ ಎಂದರು.

07:56 May 13

ಮತ್ತೊಮ್ಮೆ ವೈಎಸ್‌ಆರ್‌ಸಿಪಿ ಸರ್ಕಾರಕ್ಕಾಗಿ ಮತ ನೀಡಿ: ಸಿಎಂ ಜಗನ್

  • ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಕಡಪ ವಿಧಾನಸಭಾ ಕ್ಷೇತ್ರದ ಜಯಮಹಲ್ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ವೈಎಸ್ ಶರ್ಮಿಳಾ, ಟಿಡಿಪಿಯಿಂದ ಚಡಿಪಿರಲ್ಲ ಭೂಪೇಶ್ ಸುಬ್ಬರಾಮಿ ರೆಡ್ಡಿ ಮತ್ತು ವೈಎಸ್‌ಆರ್‌ಸಿಪಿಯಿಂದ ವೈಎಸ್ ಅವಿನಾಶ್ ರೆಡ್ಡಿ ಸ್ಪರ್ಧಿಸಿದ್ದಾರೆ. ಮತದಾನದ ಬಳಿಕ ಮಾತನಾಡಿದ ಸಿಎಂ ಜಗನ್​, ಕಳೆದ 5 ವರ್ಷಗಳ ನಮ್ಮ ಸರ್ಕಾರ ಆಡಳಿತವನ್ನು ಜನರು ನೋಡಿದ್ದಾರೆ. ನಮ್ಮ ಆಡಳಿತದಿಂದ ಲಾಭ ಪಡೆದಿದ್ದೀರಿ ಎಂದು ನೀವು ಭಾವಿಸಿದ್ದರೆ ನಮ್ಮ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.

07:51 May 13

ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯನಾಯ್ದು ಹಕ್ಕು ಚಲಾವಣೆ

  • ಮಾಜಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರು ಪತ್ನಿ ಉಷಾ ನಾಯ್ಡು ಅವರ ಜೊತೆಗೂಡಿ ಹೈದರಾಬಾದ್​ನ ಜೂಬ್ಲಿಹಿಲ್ಸ್‌ನಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಳಿಕ ಬೆರಳಿಗೆ ಅಂಟಿಸಿದ ಶಾಯಿ ಗುರುತನ್ನು ವಿಶೇಷ ಕಟೌಟ್​ ಮುಂದೆ ನಿಂತು ತೋರಿಸಿದರು.

07:43 May 13

ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ

  • ಹೈದರಾಬಾದ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಇಲ್ಲಿನ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಹಾಲಿ ಸಂಸದ ಮತ್ತು ಎಐಎಂಐಎಂ ಅಭ್ಯರ್ಥಿ ಅಸಾದುದ್ದೀನ್ ಓವೈಸಿ ವಿರುದ್ಧ ಅವರು ಸ್ಪರ್ಧೆ ಮಾಡಿದ್ದಾರೆ.

07:34 May 13

ಮತದಾನ ಮಾಡಿದ ನಟ ಜೂನಿಯರ್​ ಎನ್​ಟಿಆರ್​, ಅಲ್ಲು ಅರ್ಜುನ್​

  • ತೆಲಂಗಾಣದ 17 ಲೋಕಸಭಾ ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ನಟ ಜೂನಿಯರ್​ ಎನ್​ಟಿಆರ್​ ಮತ್ತು ಪುಷ್ಪಾ ಖ್ಯಾತಿಯ ಅಲ್ಲು ಅರ್ಜುನ್​ ಜೂಬ್ಲಿಹಿಲ್ಸ್​​ನ ಮತಕೇಂದ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಸರತಿ ಸಾಲಿನಲ್ಲಿ ನಿಂತು ನಟರು ಮತದಾನ ಮಾಡಿದ್ದು ವಿಶೇಷವಾಗಿತ್ತು.

07:31 May 13

ಒಡಿಶಾ, ಆಂಧ್ರಪ್ರದೇಶ ವಿಧಾನಸಭೆಗೂ ಮತದಾನ ಶುರು

  • ಲೋಕಸಭೆ ಚುನಾವಣೆಯ ಜೊತೆಗೆ ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆಗೂ ಮತದಾನ ಆರಂಭವಾಗಿದೆ. ಆಂಧ್ರದ 175, ಒಡಿಶಾದ 28 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ.

07:23 May 13

ಚುನಾವಣಾ ಕಣದಲ್ಲಿ 1717 ಅಭ್ಯರ್ಥಿಗಳು

  • ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್​, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಮತದಾನ ನಡೆಯುತ್ತಿದೆ. ಕಣದಲ್ಲಿ 1,717 ಅಭ್ಯರ್ಥಿಗಳಿದ್ದಾರೆ.

07:13 May 13

ಲೋಕಸಭೆ ಚುನಾವಣೆ ನಾಲ್ಕನೇ ಹಂತ

  • 2024 ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಆರಂಭವಾಗಿದೆ. 9 ರಾಜ್ಯ, 1 ಕೇಂದ್ರಾಡಳಿತ ಪ್ರದೇಶದ 96 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.
Last Updated : May 13, 2024, 12:51 PM IST

ABOUT THE AUTHOR

...view details