ಚೆನ್ನೈ: ತಮಿಳುನಾಡಿನ ದಲಿತ ರಾಜಕೀಯ ಪಕ್ಷವಾದ ವಿದುತಲೈ ಚಿರುಥೈಗಲ್ ಕಚ್ಚಿ (ವಿಸಿಕೆ) ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ಕಲ್ಲಕುರಿಚಿಯಲ್ಲಿ ನಿರ್ಣಾಯಕ ಮದ್ಯ ನಿಷೇಧ ರ್‍ಯಾಲಿ ನಡೆಸಲು ನಿರ್ಧರಿಸಿದೆ. ವಿಸಿಕೆ ಪಕ್ಷವು ದಲಿತ ಸಮುದಾಯದ ಅಪಾರ ಬೆಂಬಲ ಹೊಂದಿರುವುದು ಗಮನಾರ್ಹ.
ವಿಸಿಕೆ ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿದೆ. ಮದ್ಯ ನಿಷೇಧ ವಿಚಾರವನ್ನು ರಾಜ್ಯದ ರಾಜಕೀಯದಲ್ಲಿ ಮುನ್ನೆಲೆಗೆ ತರಲು ಮತ್ತು 2026 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅದನ್ನು ಪ್ರಮುಖ ವಿಷಯವನ್ನಾಗಿ ಮಾಡುವ ಗುರಿಯನ್ನು ಪಕ್ಷ ಹೊಂದಿದೆ ಎಂದು ಸ್ಥಾಪಕ ನಾಯಕ ಮತ್ತು ಸಂಸದ ಥೋಲ್ ತಿರುಮಾವಲವನ್ ಹೇಳಿದ್ದಾರೆ.
"ಮದ್ಯ ಮತ್ತು ಮಾದಕ ವಸ್ತುಗಳ ಪಿಡುಗಿನ ವಿಚಾರವನ್ನು ತಮಿಳುನಾಡಿನ ಸಾಮಾಜಿಕ ಮತ್ತು ರಾಜಕೀಯ ಚರ್ಚೆಯ ಕೇಂದ್ರವನ್ನಾಗಿಸಲು ನಾವು ನಿರ್ದಿಷ್ಟವಾಗಿ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ" ಎಂದು ಥೋಲ್ ತಿರುಮಾವಲವನ್ ಐಎಎನ್ಎಸ್ಗೆ ತಿಳಿಸಿದರು.
ರಾಜ್ಯದಲ್ಲಿ ಮದ್ಯ ಸೇವನೆ ತೀರಾ ಹೆಚ್ಚಾಗುತ್ತಿದ್ದು, ಕುಟುಂಬಗಳು ಮತ್ತು ಮಹಿಳೆಯರು ಇದರಿಂದ ಭಾರಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು. ಕಲ್ಲಕುರಿಚಿ ಜಿಲ್ಲೆಯ ಉಲುಂದೂರ್ ಪೆಟ್ಟೈನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ 1 ಲಕ್ಷ ಮಹಿಳೆಯರನ್ನು ಕರೆತರಲು ವಿಸಿಕೆ ಯೋಜಿಸುತ್ತಿದೆ.