ಪಾಟ್ನಾ: ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಕೇವಲ ಸರ್ಕಾರಿ ಕಡತಗಳು ಮತ್ತು ಭಾಷಣಗಳಲ್ಲಿ ಅಸ್ತಿತ್ವದಲ್ಲಿದೆಯೇ ಹೊರತು ವಾಸ್ತವದಲ್ಲಿ ಎಲ್ಲಿಯೂ ಕಾನೂನಿನ ಅನುಷ್ಠಾನವೇ ಆಗಿಲ್ಲ ಎಂದು ಜನ್ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಬಿಹಾರದಲ್ಲಿ ಇಂದು ಕಳ್ಳಬಟ್ಟಿ ಸಾರಾಯಿ ದುರಂತದಲ್ಲಿ ಜನ ಸಾವಿಗೀಡಾಗಿರುವುದಕ್ಕೆ ಕಿಶೋರ್ ಇದೇ ಸಂದರ್ಭದಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ.
ಸಿವಾನ್ ಮತ್ತು ಸರನ್ನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
"ಬಿಹಾರದಲ್ಲಿ ವಾಸ್ತವಿಕವಾಗಿ ಮದ್ಯ ನಿಷೇಧ ಜಾರಿಯೇ ಆಗಿಲ್ಲ ಎಂದು ಕಳೆದ ಮೂರು ವರ್ಷಗಳಿಂದ ಪ್ರತಿ ವೇದಿಕೆಯಲ್ಲೂ ಸಾರ್ವಜನಿಕವಾಗಿ ಹೇಳುತ್ತಿದ್ದೇನೆ. ಮದ್ಯ ನಿಷೇಧ ಕಾನೂನು ಸರ್ಕಾರಿ ದಾಖಲೆಗಳಲ್ಲಿ ಮತ್ತು ನಾಯಕರ ಭಾಷಣಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದೆ. ನಿನ್ನೆ ನಡೆದ ಘಟನೆ ದುರದೃಷ್ಟಕರ. ಒಂದೂವರೆ ವರ್ಷದ ಹಿಂದೆ ಹಿಂದೆ ಛಾಪ್ರಾದಲ್ಲಿ ನಕಲಿ ಸಾರಾಯಿ ಸೇವಿಸಿ 70ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಬಿಹಾರದಲ್ಲಿ ನಕಲಿ ಮದ್ಯದಿಂದ ಸಾವುಗಳು ಸಂಭವಿಸದ ಯಾವುದೇ ಜಿಲ್ಲೆ ಇಲ್ಲ. ಅನೇಕ ಘಟನೆಗಳು ಹೊರಜಗತ್ತಿಗೆ ಗೊತ್ತಾಗದೆ ಮುಚ್ಚಿ ಹೋಗುತ್ತವೆ. ಭ್ರಷ್ಟ ನಾಯಕರು ಮತ್ತು ಮಾಫಿಯಾಗಳು ಮಾತ್ರ ಇದರಿಂದ ಲಾಭ ಪಡೆಯುತ್ತಿದ್ದಾರೆ. ಇಷ್ಟೊಂದು ಸಾವುಗಳು ಸಂಭವಿಸಿದರೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಿಲ್ಲ. ಈ ಸರ್ಕಾರ ಅಷ್ಟೊಂದು ಸಂವೇದನಾರಹಿತವಾಗಿದೆ" ಎಂದು ಕಿಶೋರ್ ಹೇಳಿದರು.