ಲಕ್ನೋ(ಉತ್ತರ ಪ್ರದೇಶ):ಇಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ಅಚ್ಚರಿಯ ಅತಿಥಿಯೊಬ್ಬರು ಆಗಮಿಸಿ, ಭಾರೀ ಗದ್ದಲ ಸೃಷ್ಟಿಸಿದ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಬುಧವಾರ ರಾತ್ರಿ ನಡೆದಿದೆ.
ವಧು-ವರರ ಮೆರವಣಿಗೆ ಬಳಿಕ ಮದುವೆ ಮಂಟಪದಲ್ಲಿ ಭೋಜನ ಸವಿಯುತ್ತಿದ್ದ ವೇಳೆ ಚಿರತೆಯೊಂದು ಮದುವೆ ಮಂಟಪದೊಳಕ್ಕೆ ನುಗ್ಗಿದೆ. ಇದನ್ನು ಕಂಡ ವಿವಾಹಕ್ಕೆ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳು ದಿಕ್ಕಾಪಾಲಾಗಿ ಓಡಿಹೋಗಿದ್ದಾರೆ. ಈ ವೇಳೆ ಕ್ಯಾಮರಾಮೆನ್ಗಳು ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ.
ಕಲ್ಯಾಣ ಮಂಟಪದಲ್ಲಿ ಚಿರತೆ ನುಗ್ಗಿದ ಸಂಗತಿ ತಿಳಿದ ವಧು- ವರರು ಕಾರಿನಲ್ಲಿ ಅಡಗಿ ಕುಳಿತಿದ್ದಾರೆ. ಎಷ್ಟೇ ಪ್ರಯತ್ನಪಟ್ಟರೂ, ಚಿರತೆ ಮದುವೆ ಹಾಲ್ನಿಂದ ಹೊರಹೋಗಿಲ್ಲ. ಇದರಿಂದ ಹೆದರಿದ ಆಹ್ವಾನಿತರು ಕೂಡ ಕಾರು, ವಾಹನಗಳಲ್ಲಿ ಆಶ್ರಯ ಪಡೆದಿದ್ದರು.
ಮಧ್ಯರಾತ್ರಿವರೆಗೂ ಕಾರ್ಯಾಚರಣೆ:ಈ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಚಿರತೆಯು ಮೊದಲ ಮಹಡಿ ಹತ್ತಿ ಅಲ್ಲಿಯೇ ಕತ್ತಲೆಯಲ್ಲಿ ಅಡಗಿಕೊಂಡಿತ್ತು. ಅರಣ್ಯ ಇಲಾಖೆ ತಂಡ ರಕ್ಷಣಾ ಕಾರ್ಯಾಚರಣೆ ಆರಂಭಿಸಿದಾಗ, ಚಿರತೆಯು ರಕ್ಷಕರೊಬ್ಬರ ಮೇಲೆ ದಾಳಿ ಮಾಡಿತು. ಇದರಿಂದ ಅವರ ಕೈಗೆ ಗಾಯವಾಗಿ ರಕ್ತ ಚಿಮ್ಮಿತು.