ವಡೋದರಾ: ನಮ್ಮ ದೇಶದಲ್ಲಿ ಅತ್ಯಂತ ದುಬಾರಿ ಮತ್ತು ಐಷಾರಾಮಿ ಮನೆ ಇದೆ ಅಂತಾದರೆ ಅದು ಮುಖೇಶ್ ಅಂಬಾನಿಯ ಆಂಟೆಲಿಯಾ. ಆದರೆ ಇದಕ್ಕಿಂತಲೂ ಎಷ್ಟೋ ಪಟ್ಟು ದೊಡ್ಡದಾದ ಖಾಸಗಿ ನಿವಾಸವೊಂದು ಇದೆ. ಅದರ ಬಗ್ಗೆ ನಿಮಗೆನಾದರೂ ತಿಳಿದಿದೆಯೇ?. ತಿಳಿದಿಲ್ಲ ಅಂದರೆ ನಾವು ಹೇಳುತ್ತೇವೆ ಕೇಳಿ. ಅದರ ಹೆಸರು ಲಕ್ಷ್ಮಿ ವಿಲಾಸ ಅರಮನೆ.
ನೂರಾರು ಎಕರೆ ಪ್ರದೇಶದಲ್ಲಿ ಹರಡಿರುವ ವಿಶ್ವದ ಅತ್ಯಂತ ಐಷಾರಾಮಿ ಕಟ್ಟಡವಿದು. ಈ ಅರಮನೆಯು ಬ್ರಿಟಿಷ್ ರಾಜಮನೆತನದ ನಿವಾಸವಾದ ಬಕಿಂಗ್ಹ್ಯಾಮ್ ಅರಮನೆಗಿಂತ ನಾಲ್ಕು ಪಟ್ಟು ದೊಡ್ಡದು ಅಂದರೆ ನಾವು - ನೀವೆಲ್ಲ ನಂಬಲೇಬೇಕು. ಲಕ್ಷ್ಮಿ ವಿಲಾಸ ಅರಮನೆಯನ್ನು ನೋಡಲು ಎರಡು ಕಣ್ಣುಗಳು ಸಾಲದು, ನೀವು ಎಂತಹ ದೊಡ್ಡದಾದ ನಿಲುಕದ ಕನಸು ಕಾಣ್ತಿರೋ ಅದಕ್ಕಿಂತ ಮಿಗಿಲು ಈ ಅರಮನೆ. ಈ ಅರಮನೆಯು ಯಾವ ರಾಜ್ಯದಲ್ಲಿದೆ? ಅದರ ವೈಶಿಷ್ಟ್ಯಗಳೇನು? ಎಂಬುದನ್ನು ನೋಡುವುದಾರೆ,
ಲಕ್ಷ್ಮಿ ವಿಲಾಸ ಅರಮನೆ, ನಮ್ಮ ದೇಶದ ಅತ್ಯಂತ ಐಷಾರಾಮಿ ಮತ್ತು ಬೆಲೆಬಾಳುವ ಅರಮನೆ ಆಗಿದೆ. ಅಂದ ಹಾಗೆ ವೈಭೋಗದ ಪ್ಯಾಲೇಸ್ ಇರುವುದು ಗುಜರಾತ್‌ನ ವಡೋದರಾ ನಗರದಲ್ಲಿ. ಈ ಅರಮನೆಯನ್ನು 1890 ರಲ್ಲಿ ಮರಾಠ ಗಾಯಕ್ವಾಡ್ ವಂಶಸ್ಥರು ನಿರ್ಮಿಸಿದ್ದಾರೆ. ಮೇಜರ್ ಚಾರ್ಲ್ಸ್ ಮಾಂಟ್ ಎಂಬುವವರು ಅರಮನೆಯ ನಿರ್ಮಾಣಕ್ಕೆ ಮುಖ್ಯ ವಾಸ್ತುಶಿಲ್ಪಿಯಾಗಿ ಕೆಲಸ ಮಾಡಿದರು. ಈ ಭವ್ಯವಾದ ಅರಮನೆಯನ್ನು ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸುಮಾರು 500 ಎಕರೆ ಪ್ರದೇಶದಲ್ಲಿ ಹರಡಿರುವ ಈ ಅರಮನೆಯು ಬೆರಗುಗೊಳಿಸುವ ಸಭಾಂಗಣಗಳು, ಉದ್ಯಾನಗಳು ಮತ್ತು ಕಾರಂಜಿಗಳನ್ನು ಹೊಂದಿದೆ. ಅಲ್ಲದೇ ಈ ಅರಮನೆಯು 176 ಐಷಾರಾಮಿ ಕೊಠಡಿಗಳನ್ನು ಹೊಂದಿದೆ ಎಂಬುದು ಈ ಅರಮನೆಯ ಭವ್ಯತೆಗೆ ಸಾಕ್ಷಿ. ಆ ಅವಧಿಯಲ್ಲಿಯೇ ಸಯಾಜಿರಾವ್ ಗಾಯಕವಾಡ್-III ಲಕ್ಷ್ಮೀ ವಿಲಾಸವನ್ನು ನಿರ್ಮಿಸಲು ಸುಮಾರು 27 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದರು. ಆಗ ಇದು ಅತ್ಯಂತ ದೊಡ್ಡ ಮೊತ್ತವಾಗಿತ್ತು ಎಂಬುದು ನಿಮ್ಮೆಲ್ಲರಿಗೂ ತಿಳಿದಿರಲಿ.