ಬೆಂಗಳೂರು: ಅನಾರೋಗ್ಯ ಹಾಗೂ ಹಿರಿಯ ನಾಗರಿಕರ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದಿದ್ದ ಯುವತಿಯನ್ನು ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬನ್ನೇರುಘಟ್ಟ ರಸ್ತೆಯಲ್ಲಿ ವಾಸವಾಗಿದ್ದ ಸೋನಿಯಾ (29) ಬಂಧಿತೆ. ಆರೋಪಿತೆಯಿಂದ 11.50 ಲಕ್ಷದ ಮೌಲ್ಯದ 157 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆಂಧ್ರ ಪ್ರದೇಶ ಮೂಲದ ಯುವತಿ ಹಲವು ವರ್ಷಗಳಿಂದ ನಗರದಲ್ಲಿ ನೆಲೆಯೂರಿದ್ದಳು. ಬೈಯ್ಯಪ್ಪನಹಳ್ಳಿ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದ ಮನೆಯೊಂದರಲ್ಲಿ ಕೇರ್ ಟೇಕರ್ ಕಳೆದ ವರ್ಷ ಡಿಸೆಂಬರ್ನಲ್ಲಿ ಕೆಲಸಕ್ಕೆ ಸೇರಿದ್ದಳು. ಅನಾರೋಗ್ಯ ಕಾರಣ ನೀಡಿ 2024ರಲ್ಲಿ ಕೆಲಸ ತೊರೆದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಕೋಣನಕುಂಟೆ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ಆರೋಪಿತೆಯು 15 ದಿನಗಳ ಕಾಲ ಕೆಲಸ ಮಾಡಿ ಕೈಚಳಕ ತೋರಿಸಿ 108 ಗ್ರಾಂ ಚಿನ್ನಾಭರಣ ದೋಚಿದ್ದಳು. ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಯತೆಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಮತ್ತೊಂದೆಡೆ, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಬೈಯ್ಯಪ್ಪನಹಳ್ಳಿ ಪೊಲೀಸರು ಸೋನಿಯಾಳ ಪಾತ್ರವಿರುವುದನ್ನು ಕಂಡುಕೊಂಡಿದ್ದರು. ಆಕೆಯನ್ನ ವಿಚಾರಣೆ ನಡೆಸಿದಾಗ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ಧಾಳೆ ಎಂದು ಪೊಲೀಸರು ಹೇಳಿದ್ದಾರೆ.
ಕೇರ್ ಟೇಕರ್ ಆಗಿ ಕೆಲಸಕ್ಕೆ ಸೇರಿದ ಒಂದು ತಿಂಗಳೊಳಗೆ ಮನೆಯಲ್ಲಿ ಯಾರೂ ಇಲ್ಲದಿರುವಾಗ ಬೀರುವಿನಲ್ಲಿದ್ದ ಚಿನ್ನಾಭರಣ ದೋಚಿದ್ದಳು. ಬಳಿಕ ನಾಗವಾರಪಾಳ್ಯ ಹಾಗೂ ಜೆ.ಪಿ.ನಗರದ ಗಿರವಿ ಅಂಗಡಿಗಳಲ್ಲಿ ಅಡವಿಟ್ಟಿದ್ದಳು. ಆರೋಪಿತೆ ವಿರುದ್ಧ ಎರಡು ಕಳ್ಳತನ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಾಸನ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಭೂಪ
ಇದನ್ನೂ ಓದಿ: ಬೆಂಗಳೂರು: ಮನಿ ಲಾಂಡರಿಂಗ್ ಕೇಸ್ ದಾಖಲಾಗಿರೋದಾಗಿ ವೃದ್ಧೆಯನ್ನು ಬೆದರಿಸಿ 1.24 ಕೋಟಿ ವಂಚನೆ