ಬೆಂಗಳೂರು: ಮೃತಪಟ್ಟ ವ್ಯಕ್ತಿಯ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ಕಬಳಿಸಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ಧಾರೆ.
ವಂಚನೆಗೊಳಗಾದ ವರ್ಷಾ ಕೃಷ್ಣಮೂರ್ತಿ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳಾದ ಆರೀಫ್ ಉಲ್ಲಾ ಖಾನ್, ಜಿ.ವಾಸು ಹಾಗೂ ನಾಗೇಂದ್ರ ಎಂಬವರನ್ನು ಬಂಧಿಸಿ ಜಿಪಿಎ ಪತ್ರ, ಸೇಲ್ ಡೀಡ್ ಇನ್ನಿತರ ನಕಲಿ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಗಳೆಲ್ಲರೂ ಲಿಂಗರಾಜಪುರ ಸುತ್ತಮುತ್ತಲಿನ ನಿವಾಸಿಗಳಾಗಿದ್ದಾರೆ. ಹಲವು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಮತ್ತೊಂದೆಡೆ ದೂರುದಾರ ಮಹಿಳೆ ಮಾವ ಈಶ್ವರ್ ಪ್ರಸಾದ್ ಅವರು ಕೊತ್ತನೂರು ವಿಲೇಜ್ ಬಳಿಯಿರುವ ಸುಮಾರು 8 ಕೋಟಿ ರೂ ಮೌಲ್ಯದ 13 ಗುಂಟೆಯ ಜಮೀನಿನ ಮಾಲೀಕರಾಗಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಮೃತರಾಗಿದ್ದರು. ಇದನ್ನರಿತ ಆರೋಪಿಗಳು ಮೃತರ ಹೆಸರಿನಲ್ಲಿ ನಕಲಿ ಜಿಪಿಎ ಮಾಡಿಸಿಕೊಂಡಿದ್ದರು. ಅಲ್ಲದೇ ಮೃತ ವ್ಯಕ್ತಿಯ ಹೆಸರಿನಲ್ಲಿ ಆರೋಪಿತ ವಾಸು ಎಂಬವರಿಗೆ ಹೆಸರಿನಲ್ಲಿ ಮಾರಾಟ ಮಾಡಿರುವ ರೀತಿ ಸೇಲ್ ಡೀಡ್ ಮಾಡಿಸಿಕೊಳ್ಳುವುದಲ್ಲದೆ, ಕೆ.ಆರ್.ಪುರ ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಮಹಿಳೆ ಮಾವ ಮೃತರಾದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಗೋವಾದಲ್ಲಿ ನೆಲೆಸಿದ್ದರು. ಇತ್ತೀಚೆಗೆ ಕೊತ್ತನೂರು ವಿಲೇಜ್ಗೆ ಭೇಟಿ ನೀಡಿದಾಗ ಆರೋಪಿಗಳು ಜಮೀನು ಕಬಳಿಸಿರುವುದು ಗೊತ್ತಾಗಿದೆ. ಈ ಸಂಬಂಧ ನಗರ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮೂವನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಇನ್ನೋರ್ವ ಭಾಗಿಯಾಗಿದ್ದು, ಆತನ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಷೇರುಪೇಟೆಯಲ್ಲಿ ಐದು ಪಟ್ಟು ಲಾಭಂಶ ಕೊಡಿಸುವ ಆಮಿಷ: ನಂಬಿ 46 ಲಕ್ಷ ರೂ ಕಳೆದುಕೊಂಡ ಮಂಗಳೂರಿಗ