ಕರ್ನಾಟಕ

karnataka

ETV Bharat / bharat

ಮಹಾಕುಂಭ ಮೇಳ-2025; ಕಾಲ್ತುಳಿತದ ದುರ್ಘಟನೆ ಬಳಿಕ ಪ್ರಯಾಗ್​ರಾಜ್​ನಲ್ಲಿ ಹೇಗಿದೆ ಪರಿಸ್ಥಿತಿ? - MAHA KUMBH MELA 2025

ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 30 ಸಾವು ಸಂಭವಿಸಿದ ಬಳಿಕವೂ ಜನದಟ್ಟನೆ ಮುಂದುವರೆದಿದ್ದು, ಪವಿತ್ರ ಸ್ನಾನಕ್ಕೆ ಜನರು ಮುಂದಾಗಿದ್ದಾರೆ.

large-number-of-devotees-flock-maha-kumbh-day-after-stampede
ಮಹಾ ಕುಂಭದಲ್ಲಿ ಭಕ್ತರು (ANI)

By ETV Bharat Karnataka Team

Published : Jan 30, 2025, 1:53 PM IST

ಪ್ರಯಾಗ್​ರಾಜ್ (ಉತ್ತರ ಪ್ರದೇಶ)​: 30 ಜನರ ಸಾವಿಗೆ ಕಾರಣವಾದ ಕಾಲ್ತುಳಿತ ಘಟನೆ ನಂತರವೂ ಮಹಾಕುಂಭ ಮೇಳಕ್ಕೆ ಭಕ್ತರ ಸಮೂಹ ಹರಿದು ಬರುತ್ತಿದೆ. ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳದಲ್ಲಿ ಗಣನೀಯ ಪ್ರಮಾಣದಲ್ಲಿ ಜನರು ಭೇಟಿಯನ್ನು ಮುಂದುವರೆಸಿದ್ದಾರೆ.

ಗುರುವಾರ ಮುಂಜಾನೆಯ ದಟ್ಟ ಮಂಜಿನ ಹೊದಿಕೆ ನಡುವೆಯೂ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಜನವರಿ 31ರ ವರೆಗೆ ಪ್ರಯಾಗ್​ರಾಜ್​ನಲ್ಲಿ ದಟ್ಟ ಮಂಜಿನ ಹೊದಿಕೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಧಿಕದಿಂದ ಭಾರೀ ಮಂಜಿನ ವಾತಾವರಣ ರಾತ್ರಿ ಮತ್ತು ಮುಂಜಾನೆ ಸಮಯದಲ್ಲಿ ಇರಲಿದೆ. ಜನವರಿ 31ರ ವರೆಗೆ ಮುಂಜಾನೆಯ ಮಂಜು ರಾಜ್ಯವನ್ನು ಆವರಿಸಿರಲಿದೆ ಎಂದು ಐಎಂಡಿ ಎಕ್ಸ್​ನಲ್ಲಿ ತಿಳಿಸಿದೆ. ಹವಾಮಾನ ಇಲಾಖೆ ಪ್ರಕಾರ, ಕನಿಷ್ಠ ತಾಪಮಾನ 10-13 ಡಿಗ್ರಿ ಸೆಲ್ಸಿಯಸ್​ ದಾಖಲಾಗಲಿದೆ.

ಕಾಲ್ತುಳಿತ ದುರ್ಘಟನೆ :ಮೌನಿ ಅಮಾವಾಸೆ ಮುನ್ನ ಮಂಗಳವಾರ ತಡ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ 30 ಮಂದಿ ಸಾವನ್ನಪ್ಪಿದ್ದು, 60 ಮಂದಿ ಗಾಯಗೊಂಡರು.

ಮೌನಿ ಅಮಾವಾಸೆಯ ಪವಿತ್ರ ದಿನದಂದು ಲಕ್ಷಾಂತರ ಜನರು ಪವಿತ್ನ ಸ್ನಾನ ಮಾಡಲು ಆಗಮಿಸಿದ್ದು, ಜನದಟ್ಟಣೆ ನಿರ್ಮಾಣವಾಯಿತು. ಈ ದಟ್ಟಣೆ ತಡರಾತ್ರಿ 1 ರಿಂದ 2ಗಂಟೆಗಳ ಕಾಲ ಇತ್ತು ಎಂದು ಅನಾಹುತ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ ಡಿಐಜಿ ವೈಭವ್​ ಕೃಷ್ಣ ತಿಳಿಸಿದರು.

ಜನ ಸಂದಣಿಯಿಂದ ಈ ಘಟನೆ ಉಂಟಾಯಿತು. ಜನ ಸಮೂಹವೂ ಬ್ಯಾರಿಕೇಡ್​ ದಾಟಿ, ಮತ್ತೊಂದು ಕಡೆಯಿಂದ ಹಾರಲು ಮುಂದಾಗಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿ, 30 ಮಂದಿ ಸಾವನ್ನಪ್ಪಿದ್ದು, 60 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ಸಾವನ್ನಪ್ಪಿದ 25 ಮಂದಿಯನ್ನು ಗುರುತಿಸಲಾಗಿದೆ. ಕರ್ನಾಟಕದ ನಾಲ್ವರು, ಅಸ್ಸೋಂ ಮತ್ತು ಗುಜರಾತ್​ ರಾಜ್ಯದಲ್ಲಿ ಕ್ರಮವಾಗಿ ಓರ್ವರು ಸಾವನ್ನಪ್ಪಿದ್ದಾರೆ. ಗಾಯಗೊಂಡವರಲ್ಲಿ 36 ಜನ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗುತ್ತಿದ್ದು, ಉಳಿದವರನ್ನು ಅವರ ಕುಟುಂಬದ ಜೊತೆ ಕಳುಹಿಸಲಾಗಿದೆ.

ಮೌನಿ ಅಮಾವಾಸೆಯಂದು ಏಳೂವರೆ ಕೋಟಿ ಜನರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ನ್ಯಾಯಾಂಗ ಆಯೋಗಕ್ಕೆ ತನಿಖೆ: ಘಟನೆ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್​ ಘಟನೆ ಬಗ್ಗೆ ತನಿಖೆ ನಡೆಸಲು ಹರ್ಷ ಕುಮಾರ್​, ಮಾಜಿ ಡಿಜಿ ವಿಕೆ ಗಪ್ತಾ ಮತ್ತು ನಿವೃತ್ತ ಐಎಎಸ್​ ಅಧಿಕಾರಿ ವಿಕೆ ಸಿಂಗ್​ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಾಂಗ ಆಯೋಗ ರಚಿಸಿದ್ದಾರೆ. ಈ ಆಯೋಗವು ಕಾಲ್ತುಳಿತಕ್ಕೆ ಕಾರಣ ಏನು ಎಂಬುದರ ಕುರಿತು ಪರಿಶೀಲಿಸಲಿದೆ. ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದರು.

ಇಂತಹ ದುರಂತ ಹೇಗೆ ಸಂಭವಿಸಿತು ಎಂಬುದನ್ನು ತಳಮಟ್ಟದಿಂದ ತಿಳಿಯುವುದು ಅಗತ್ಯ. ಮುಖ್ಯ ಕಾರ್ಯದರ್ಶಿ ಡಿಜಿಪಿ ಮಹಾಕುಂಭಕ್ಕೆ ಗುರುವಾರ ತೆರಳಿ, ಈ ಕುರಿತು ಸಂಪೂರ್ಣ ತನಿಖೆ ನಡೆಸಲಿದ್ದಾರೆ ಎಂದು ಸಿಎಂ ತಿಳಿಸಿದರು.

ಡಿಐಜಿ ಕೃಷ್ಣ ಮಾತನಾಡಿ, ಮೇಳದಲ್ಲಿ ಸಾಲಿನ ನಿರ್ವಹಣೆಗಾಗಿ ಮತ್ತು ಅಖಾರಾ ಪ್ರದೇಶಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಅವು ಕೂಡ ಒತ್ತಡಕ್ಕೆ ದಾರಿ ಮಾಡಿಕೊಟ್ಟವು. ಬ್ಯಾರಿಕೇಡ್​ಗಳು ಮುರಿಯುತ್ತಿದ್ದಂತೆ ಜನರು, ಬ್ರಹ್ಮ ಮುಹೂರ್ತದ ಸಮಯದಲ್ಲಿ ಪವಿತ್ರ ಸ್ನಾನಕ್ಕಾಗಿ ಕಾದು ಕುಳಿತವರ ಮೇಲೆ ಬಿದ್ದಿದ್ದಾರೆ. ಅನೇಕ ಮಹಿಳೆಯರು ಮತ್ತು ಮಕ್ಕಳು ಬೀಳುತ್ತಿದ್ದಂತೆ ಅನಾಹುತ ಸಂಭವಿಸಿದೆ. ಇದೀಗ ಯಾವುದೇ ವಿಐಪಿ ಶಿಷ್ಟಾಚಾರ ಪಾಲಿಸದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ದಿಢೀರ್​​ ಎಂದು ಹೆಚ್ಚಿದ ಭಕ್ತರು : ಪ್ರತ್ಯಕ್ಷ ದರ್ಶಿಗಳ ಪ್ರಕಾರ, ಸಂಗಮದಲ್ಲಿ ತಕ್ಷಣಕ್ಕೆ ಭಕ್ತರ ಸಂಖ್ಯೆ ಹೆಚ್ಚಿತು. ಶುಭ ಮುಹೂರ್ತ ಶುರುವಾಗುವ ಬೆಳಗ್ಗೆ 3ರ ಸಮಯದಲ್ಲಿ ಪವಿತ್ರ ಸ್ನಾನ ಮಾಡಬೇಕು ಎಂಬ ಆಸೆಯಿಂದ ಜನರ ಸಂಖ್ಯೆ ಹೆಚ್ಚಿತು.

ಕಾಲ್ತುಳಿತದ ಬಳಿಕ ಅಖಾರಗಳು ಸ್ನಾನ ಸಂಪ್ರದಾಯವನ್ನು ರದ್ದು ಮಾಡಿ, ಮಧ್ಯಾಹ್ನದ ಬಳಿಕ ನಡೆಸಿದರು. ಸಂಗಮ ಘಾಟ್​ನಲ್ಲಿ ಹೆಚ್ಚಿನ ಜನರಿದ್ದು, ಗಂಗಾದಂತಹ ಘಾಟ್​ನಲ್ಲಿ ಕಡಿಮೆ ಜನಸಂದಣಿ ಕಂಡುಬಂತು.

ಮಹಾಕುಂಭ ಮೇಳ ಆರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು 20 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಗಾಂಧೀಜಿ 77ನೇ ಪುಣ್ಯತಿಥಿ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಗೌರವ ನಮನ

ಇದನ್ನೂ ಓದಿ:ಆಂಧ್ರದಲ್ಲಿ ಇಂದಿನಿಂದ ಸರ್ಕಾರಿ ಸೇವೆಗಳು WhatsAppನಲ್ಲೇ ಲಭ್ಯ; ದೇಶದಲ್ಲಿ ಇದು ಮೊದಲ ಪ್ರಯತ್ನ

ABOUT THE AUTHOR

...view details