ನವದೆಹಲಿ:ಉದ್ಯೋಗಕ್ಕಾಗಿ ಭೂ ಹಗರಣ ಆರೋಪಿ, ಲಾಲು ಪ್ರಸಾದ್ ಯಾದವ್ ಅವರ ಆಪ್ತ ಅಮಿತ್ ಕತ್ಯಾಲ್ ಅವರ ಆರೋಗ್ಯ ಪರಿಶೀಲಿಸಿ ವರದಿ ಸಲ್ಲಿಸಲು ಏಮ್ಸ್ ವೈದ್ಯಕೀಯ ಸಂಸ್ಥೆಗೆ ದೆಹಲಿ ಹೈಕೋರ್ಟ್ ಭಾನುವಾರ ಸೂಚಿಸಿದೆ.
ಪ್ರಕರಣದ ಆರೋಪಿಯಾಗಿರುವ ಅಮಿತ್ ಕತ್ಯಾಲ್ ಅವರು ತಮಗೆ ಜೈಲಿನಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗುತ್ತಿಲ್ಲ. ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ವೇಳೆ ಕೋರ್ಟ್, ವೈದ್ಯ ತಜ್ಞರ ಸಮಿತಿ ರಚಿಸಿ ಆರೋಪಿಯ ಆರೋಗ್ಯ ಹೇಗಿದೆ ಎಂಬುದನ್ನು ವಾರದೊಳಗೆ (ಜೂನ್ 14) ಮಾಹಿತಿ ನೀಡಲು ನಿರ್ದೇಶಿಸಿತು.
ಆರೋಪಿಯು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರನ್ನು ಕಾಡುತ್ತಿರುವ ಕಾಯಿಲೆಗಳ ಬಗ್ಗೆ ತಪಾಸಣೆ ನಡೆಸಲು ಮೂವರು ವಿಭಿನ್ನ ಆರೋಗ್ಯ ತಜ್ಞರುಳ್ಳ ಸಮಿತಿಯನ್ನು ರಚಿಸಬೇಕು. ತಪಾಸಣೆಯ ಬಳಿಕ ವರದಿಯನ್ನು ಜೂನ್ 14 ಅಥವಾ ಅದಕ್ಕಿಂತ ಮೊದಲು ಸಲ್ಲಿಸಬೇಕು ಎಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅವರಿದ್ದ ಪೀಠ ಹೇಳಿದೆ.
ಸಂವಿಧಾನದ 21 ನೇ ವಿಧಿಯ ಪ್ರಕಾರ, ಆರೋಗ್ಯವೂ ಕೂಡ ಒಂದು ಹಕ್ಕಾಗಿದೆ. ಜೈಲಿನಲ್ಲಿ ಇರುವ ಆರೋಪಿಯು ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶವಿದೆ. ಅಲ್ಲಿ ಆತನಿಗೆ ವಿಶೇಷ ಚಿಕಿತ್ಸೆ ಸಿಗುತ್ತಿಲ್ಲವಾದಲ್ಲಿ ಮಧ್ಯಂತರ ಜಾಮೀನಿನ ಮೇಲೆ ವ್ಯಕ್ತಿಯನ್ನು ಏಕೆ ಬಿಡುಗಡೆ ಮಾಡಬಾರದು ಎಂದು ಕೋರ್ಟ್ ಪ್ರಶ್ನಿಸಿದೆ.
ವಾದ- ಪ್ರತಿವಾದದ ವೇಳೆ ಜಾರಿ ನಿರ್ದೇಶನಾಲಯದ (ಇಡಿ) ಪರ ವಕೀಲರು, ಅರ್ಜಿದಾರರ ವೈದ್ಯಕೀಯ ಕಾಯಿಲೆಗಳು ಗಂಭೀರವಾಗಿಲ್ಲ. ಜೈಲಿನಲ್ಲೇ ಅವರಿಗೆ ಅಗತ್ಯವಾದ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಪ್ರತಿಯಾಗಿ ಅಮಿತ್ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್ ಅವರು, ಅಮಿತ್ ಕತ್ಯಾಲ್ ಅವರು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. 10 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆ ತಿಹಾರ್ ಜೈಲಿನಲ್ಲಿ ಲಭ್ಯವಿಲ್ಲ. ಜಾಮೀನು ನೀಡಬೇಕು ಎಂದು ಕೋರಿದರು.
ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಯಾದವ್ ಅವರ ಆಪ್ತರಾಗಿರುವ ಅಮಿತ್ ಕತ್ಯಾಲ್ ಅವರನ್ನು ಇಡಿ ಅಧಿಕಾರಿಗಳು 2023 ರ ನವೆಂಬರ್ 11 ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಪರವಾಗಿ ಕತ್ಯಾಲ್ ಹಲವಾರು ಉದ್ಯೋಗಾಕಾಂಕ್ಷಿಗಳಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದರು ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
ಅಭ್ಯರ್ಥಿಗಳಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ 'ಎಕೆ ಇನ್ಫೋಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್' ಹೆಸರಿನ ಕಂಪನಿಯ ನಿರ್ದೇಶಕ ಕತ್ಯಾಲ್ ಅವರಾಗಿದ್ದಾರೆ. ಆರ್‌ಜೆಡಿ ವರಿಷ್ಠರ ಕುಟುಂಬದ ಇತರ ಕೆಲವು ಸದಸ್ಯರು ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಈ ತಿಂಗಳೂ ಪ್ರಕರಣದ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ:ಉದ್ಯೋಗಕ್ಕಾಗಿ ಭೂಮಿ ಹಗರಣ: ತೇಜಸ್ವಿ ಯಾದವರನ್ನ 4 ಗಂಟೆ ವಿಚಾರಣೆ ನಡೆಸಿದ ಇಡಿ