ಲಾಹೌಲ್ ಸ್ಪಿತಿ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಹಳ್ಳಿಯೊಂದಕ್ಕೆ ಮೊದಲ ಬಾರಿ ಮೊಬೈಲ್ ನೆಟ್‌ವರ್ಕ್ ಲಭ್ಯವಾಗಿದ್ದು, ಈ ಗ್ರಾಮದ ಜನರಿಗೆ ಖುದ್ದು ಪ್ರಧಾನಿ ಮೋದಿ ಕರೆ ಮಾಡಿ, ಅಭಿನಂದಿಸಿದ್ದಾರೆ. ಅಷ್ಟೇ ಅಲ್ಲ, ಗ್ರಾಮಸ್ಥರ ಯೋಗಕ್ಷೇಮ ವಿಚಾರಿಸಿ ಸುಮಾರು 15 ನಿಮಿಷಗಳ ಕಾಲ ಮಾತನಾಡಿದ್ದಾರೆ.
ಲಾಹೌಲ್ ಸ್ಪಿತಿ ಜಿಲ್ಲೆಯ ಗ್ಯು ಎಂಬ ಗ್ರಾಮಕ್ಕೆ ಇದುವರೆಗೂ ಮೊಬೈಲ್ ನೆಟ್‌ವರ್ಕ್ ಸಿಗುತ್ತಿರಲಿಲ್ಲ. ಕೆಲ ತಿಂಗಳ ಹಿಂದೆ ಗ್ರಾಮದಲ್ಲೇ ಮೊಬೈಲ್ ಟವರ್ ಅಳವಡಿಸಲಾಗಿದ್ದು, ಇದೀಗ ಮೊಬೈಲ್ ನೆಟ್‌ವರ್ಕ್ ಸಿಗುತ್ತಿದೆ. ಈ ನೆಟ್‌ವರ್ಕ್ ಗ್ರಾಮಕ್ಕೆ ಬಂದ ತಕ್ಷಣವೇ ಪ್ರಧಾನಿ ಮೋದಿ ಗ್ರಾಮದ ಮುಖ್ಯಸ್ಥರಿಗೆ ಕರೆ ಮಾಡಿದ್ದಾರೆ. ದೋರ್ಜೆ ಎಂಬ ಶಿಕ್ಷಕರಿಗೆ ಮೋದಿ ಕರೆ ಮಾಡಿ, ಇತರ ಗ್ರಾಮಸ್ಥರೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಂದಾಜು 14 ನಿಮಿಷಗಳ ಕಾಲ ಪ್ರಧಾನಿ ಮತ್ತು ಗ್ರಾಮಸ್ಥರ ನಡುವೆ ಮಾತುಕತೆ ನಡೆದಿದ್ದು, ಇದು ಎಲ್ಲೆಡೆ ಚರ್ಚೆಯಾಗುತ್ತಿದೆ.
ಕಿನ್ನೌರ್ ಮತ್ತು ಲಾಹೌಲ್ ಸ್ಪಿತಿ ಜಿಲ್ಲೆಗಳ ಗಡಿಯಲ್ಲಿರುವ ಈ ಗ್ರಾಮವು ಸುಮಾರು 11,000 ಅಡಿ ಎತ್ತರದ ಪ್ರದೇಶದಲ್ಲಿದೆ. ಗ್ರಾಮದ ಜನರು ನೆಟ್‌ವರ್ಕ್ ಹುಡುಕಿಕೊಂಡು ಸುಮಾರು 7ರಿಂದ 8 ಕಿಲೋಮೀಟರ್ ದೂರ ಹೋಗಬೇಕಾಗಿತ್ತು. ಕಳೆದ ವರ್ಷ ದೀಪಾವಳಿ ಆಚರಿಸಲು ಪ್ರಧಾನಿ ಮೋದಿ ಕಿನ್ನೌರ್‌ಗೆ ಬಂದಿದ್ದರು. ಆ ಸಮಯದಲ್ಲಿ ಕೆಲವು ಗ್ರಾಮಸ್ಥರು ಈ ಸಮಸ್ಯೆಯನ್ನು ಪ್ರಧಾನಿಗೆ ತಿಳಿಸಿದ್ದರು ಎಂದು ಎನ್ನಲಾಗಿದೆ.