ನವದೆಹಲಿ: ವಿಶ್ವದಾದ್ಯಂತ ದಾಖಲೆಯ ತಾಪಮಾನ ಮತ್ತು ವಿಪರೀತ ಹವಾಮಾನಕ್ಕೆ ಕಾರಣವಾದ 2023/24ರ ಎಲ್ ನಿನೋ ಹವಾಮಾನ ಪರಿಸ್ಥಿತಿಯು ಈ ವರ್ಷದ ಕೊನೆಯಲ್ಲಿ ಲಾ ನಿನಾ ಪರಿಸ್ಥಿತಿಗಳಿಗೆ ಪರಿವರ್ತನೆಯಾಗಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ತಿಳಿಸಿದೆ.
ಜಗತ್ತು 2023-24ರಲ್ಲಿ ಈ ಹಿಂದೆ ಎಂದೂ ಕಾಣದಂಥ ತೀವ್ರ ಉಷ್ಣಾಂಶದ ಏಪ್ರಿಲ್ ತಿಂಗಳಿಗೆ ಮತ್ತು ದಾಖಲೆಯ ಹೆಚ್ಚಿನ ತಾಪಮಾನದ ಸತತ ಹನ್ನೊಂದನೇ ತಿಂಗಳಿಗೆ ಸಾಕ್ಷಿಯಾಗಿದೆ. ಡಬ್ಲ್ಯುಎಂಒ ಪ್ರಕಾರ, ಕಳೆದ 13 ತಿಂಗಳುಗಳಿಂದ ಸಮುದ್ರದ ಮೇಲ್ಮೈ ತಾಪಮಾನವು ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗಿದೆ.
ಎಲ್ ನಿನೋ ಇದು ಮಧ್ಯ ಮತ್ತು ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿ ನೈಸರ್ಗಿಕವಾಗಿ ಸಂಭವಿಸುವ ಹವಾಮಾನ ಪರಿಸ್ಥಿತಿಯಾಗಿದೆ. ಆದರೆ ಈ ಬಾರಿ ಅಸಾಮಾನ್ಯ ತಾಪಮಾನ ಏರಿಕೆ, ಮಾನವ ಚಟುವಟಿಕೆಗಳಿಂದ ಹಸಿರುಮನೆ ಅನಿಲಗಳ ಬಿಡುಗಡೆಯಿಂದ ವಾತಾವರಣ ಮತ್ತು ಸಾಗರದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಶಕ್ತಿಯಿಂದಾಗಿ ಎಲ್ ನಿನೋ ತೀವ್ರವಾಗಿದೆ ಎಂದು ಡಬ್ಲ್ಯುಎಂಒ ಹೇಳಿದೆ.
ಸದ್ಯ ಚಾಲ್ತಿಯಲ್ಲಿರುವ, ಆದರೆ ದುರ್ಬಲಗೊಳ್ಳುತ್ತಿರುವ ಎಲ್ ನಿನೊ ಹವಾಮಾನ ಪರಿಸ್ಥಿತಿಗಳಿಂದಾಗಿ ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ದಕ್ಷಿಣ ಏಷ್ಯಾದ ಲಕ್ಷಾಂತರ ಜನರು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾರಣಾಂತಿಕವಾದ ಬಿಸಿಲಿನ ಹೊಡೆತ ಎದುರಿಸುವಂತಾಗಿತ್ತು. ಡಬ್ಲ್ಯುಎಂಒ ಗ್ಲೋಬಲ್ ಪ್ರೊಡಕ್ಷನ್ ಸೆಂಟರ್ಸ್ ಆಫ್ ಲಾಂಗ್-ರೇಂಜ್ ಫೋರ್ ಕಾಸ್ಟ್ನ ಇತ್ತೀಚಿನ ಮುನ್ಸೂಚನೆಗಳ ಪ್ರಕಾರ ಜೂನ್-ಆಗಸ್ಟ್ನಲ್ಲಿ ತಟಸ್ಥ ಪರಿಸ್ಥಿತಿಗಳು ಉಂಟಾಗಬಹುದಾದ ಅಥವಾ ಎಲ್ ನಿನೋ ಲಾ ನಿನಾಗೆ ಪರಿವರ್ತನೆಯಾಗುವ ಸಮಾನ ಸಂಭಾವ್ಯತೆಗಳಿವೆ.