ನವದೆಹಲಿ:ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಹತ್ಯೆ ಪ್ರಕರಣ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿರುವ 24 ಗಂಟೆಗಳ ರಾಷ್ಟ್ರವ್ಯಾಪಿ ಮುಷ್ಕರ ಇಂದು ಬೆಳಗ್ಗೆ 6 ಗಂಟೆಗೆ ಆರಂಭವಾಗಿದೆ. ನಾಳೆ (ಭಾನುವಾರ) ಬೆಳಗ್ಗೆ 6 ಗಂಟೆಯವರೆಗೆ ಇದು ಮುಂದುವರೆಯಲಿದೆ. ಇದರಿಂದ ದೇಶದ ಎಲ್ಲ ಆಸ್ಪತ್ರೆಗಳು ಬಂದ್ ಆಗಿವೆ.
ದೇಶದ ಹಲವು ಆಸ್ಪತ್ರೆಗಳ ಮುಂದೆ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ತುರ್ತು ಮತ್ತು ಅಪಘಾತ ಚಿಕಿತ್ಸಾ ಸೇವಾ ಘಟಕಗಳು ಮಾತ್ರ ಕಾರ್ಯನಿರ್ವಹಿಸಲಿವೆ. ಇದನ್ನು ಹೊರತಪಡಿಸಿ, ಒಪಿಡಿಗಳು ಮತ್ತು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುವುದಿಲ್ಲ ಎಂದು ಐಎಂಎ ಕರೆ ನೀಡಿದೆ.
ಮಹಿಳಾ ಆಯೋಗದ ವರದಿ:ಈ ಮಧ್ಯೆ, ಪ್ರಕರಣದ ತನಿಖೆ ನಡೆಸಲು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ರಚಿಸಿದ್ದ ಇಬ್ಬರು ಸದಸ್ಯರ ವಿಚಾರಣಾ ಸಮಿತಿಯು ಆತಂಕಕಾರಿ ವಿಚಾರಗಳನ್ನು ಬಹಿರಂಗಪಡಿಸಿದೆ. ಸ್ಥಳ ಪರಿಶೀಲನೆ ನಡೆಸಿದ ಸಮಿತಿಯು ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದು, ಅದರಲ್ಲಿ ಆಸ್ಪತ್ರೆಯಲ್ಲಿನ ಕಳಪೆ ಭದ್ರತೆ, ಸೌಲಭ್ಯಗಳು, ಪೊಲೀಸ್ ತನಿಖೆಯಲ್ಲಿ ಲೋಪ ಹಾಗೂ ಸಿಬ್ಬಂದಿಗೆ ರಕ್ಷಣೆಯ ಕೊರತೆಯನ್ನು ಉಲ್ಲೇಖಿಸಿದೆ.
ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಎನ್‌ಸಿಡಬ್ಲ್ಯೂ, ಆರ್.ಜಿ. ಕರ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಮತ್ತು ಭದ್ರತಾ ಲೋಪದಿಂದ ಅನಾಹುತ ಸಂಭವಿಸಿದೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಯಾವುದೇ ರಕ್ಷಣಾ ವ್ಯವಸ್ಥೆ ಇಲ್ಲವಾಗಿದೆ. ವೈದ್ಯೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ನಡೆದ ಸ್ಥಳವಾದ ಸೆಮಿನಾರ್ ಹಾಲ್ ಅನ್ನು ನವೀಕರಣ ಮಾಡಲು ಮುಂದಾಗಿರುವುದು ಸಾಕ್ಷ್ಯ ನಾಶದ ಉದ್ದೇಶವಾಗಿದೆ. ವಿರೋಧದ ನಂತರ ಪೊಲೀಸರು ಹಾಲ್ಗೆ ಬೀಗ ಜಡಿದಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.
ಆಸ್ಪತ್ರೆಯ ನಡೆ ಅನುಮಾನಾಸ್ಪದ:ವೈದ್ಯೆ ವಿದ್ಯಾರ್ಥಿನಿ ಹತ್ಯೆಯ ಹಿಂದೆ ಹಲವು ಅನುಮಾನಗಳಿವೆ. ಆಸ್ಪತ್ರೆಯ ವೈದ್ಯರು ವೈದ್ಯೆಯ ಕುಟುಂಬಕ್ಕೆ ಕರೆ ಮಾಡಿ, ನಿಮ್ಮ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದೆ. ಆದರೆ, ಇದು ನಿಚ್ಚಳವಾಗಿ ಕೊಲೆ ಘಟನೆ. ಇದು ಆಸ್ಪತ್ರೆಯ ಈ ನಡೆ ಅನುಮಾನ ಎಡೆ ಮಾಡಿಕೊಟ್ಟಿದೆ. ಎನ್‌ಸಿಡಬ್ಲ್ಯೂನ ವಿಚಾರಣಾ ಸಮಿತಿಯು, ಘಟನೆಯ ಸಮಯದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ. ರಾತ್ರಿ ಪಾಳಿಯಲ್ಲಿ ತರಬೇತಿ ವಿದ್ಯಾರ್ಥಿಗಳು, ವೈದ್ಯರು ಮತ್ತು ನರ್ಸ್ಗಳಿಗೆ ಸಾಕಷ್ಟು ಭದ್ರತೆ ಇರಲಿಲ್ಲ ಎಂದು ಹೇಳಿದೆ.
ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಹತ್ಯೆ ಪ್ರಕರಣ ಬಯಲಾದ ಬಳಿಕ ರಾಷ್ಟ್ರೀಯ ಮಹಿಳಾ ಆಯೋಗವು ಸುಮೊಟೋ ಕೇಸ್ ದಾಖಲಿಸಿಕೊಂಡು, ಆಗಸ್ಟ್ 10ರಂದು ಎನ್‌ಸಿಡಬ್ಲ್ಯೂ ಸದಸ್ಯೆ ಡೆಲಿನಾ ಖೋಂಡ್‌ಗುಪ್ ಮತ್ತು ಪಶ್ಚಿಮ ಬಂಗಾಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲೆ ಸೋಮಾ ಚೌಧರಿ ಅವರುಳ್ಳ ದ್ವಿಸದಸ್ಯ ಸಮಿತಿ ರಚಿಸಿತ್ತು. ಸಮಿತಿಯು ಆಗಸ್ಟ್ 12ರಂದು ಕೋಲ್ಕತ್ತಾದಲ್ಲಿನ ಆಸ್ಪತ್ರೆಗೆ ಆಗಮಿಸಿ ತನಿಖೆ ನಡೆಸಿದೆ.
ಇದನ್ನೂ ಓದಿ:ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಕೇಸ್: ಗ್ಯಾಂಗ್ರೇಪ್ ಶಂಕಿಸಿ ಸಿಬಿಐಗೆ ಪೋಷಕರ ದೂರು - Kolkata Doctor Rape murder