ಕೊಚ್ಚಿ(ಎರ್ನಾಕುಲಂ):ಕೇರಳದ ಆತ್ಮಾಹುತಿ ದಾಳಿ ಎಸಗಲು ಸಂಚು ರೂಪಿಸಿರುವ ಪ್ರಕರಣಗಳಲ್ಲಿ ರಿಯಾಜ್ ಅಬೂಬಕ್ಕರ್ (29) ಎಂಬ ಉಗ್ರ 'ದೋಷಿ' ಎಂದು ಕೊಚ್ಚಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯ ಇಂದು ತೀರ್ಪು ನೀಡಿತು. 2019ರಲ್ಲಿ ಈತನನ್ನು ಬಂಧಿಸಲಾಗಿತ್ತು. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ನಾಳೆ ಪ್ರಕಟಿಸಲಿದೆ.
ಪಾಲಕ್ಕಾಡ್ನ ಕೊಲ್ಲಂಕೋಡ್ ನಿವಾಸಿ ರಿಯಾಜ್ ಅಬೂಬಕರ್, ಕೇರಳದಲ್ಲಿ ಸರಣಿ ಸ್ಫೋಟಕ್ಕೆ ಯೋಜನೆ ರೂಪಿಸಿರುವ ಮೂಲಕ ಭಯೋತ್ಪಾದನಾ ಚಟುವಟಿಕೆಗಳನ್ನು ಬೆಂಬಲಿಸಿದ್ದ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ (UAPA) ಸೆಕ್ಷನ್ 38 ಮತ್ತು 39 ಹಾಗೂ ಭಾರತೀಯ ದಂಡ ಸಂಹಿತೆ 120ಬಿ ಅಡಿಯಲ್ಲಿ ಈತ ತಪ್ಪಿತಸ್ಥ ಎಂದು ನ್ಯಾಯಾಲಯ ಹೇಳಿದೆ.
ಅಪರಾಧಿಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ಪ್ರಾಸಿಕ್ಯೂಷನ್ ಕೋರಿತು. ಈಗಾಗಲೇ 5 ವರ್ಷ ಜೈಲು ವಾಸ ಅನುಭವಿಸಿರುವ ಈತ, ಕೆಲವರ ಪ್ರಚೋದನೆಯ ಮೇರೆಗೆ ಐಸಿಸ್ ಸೇರ್ಪಡೆಗೊಂಡಿದ್ದಾನೆ. ಶಿಕ್ಷೆ ರದ್ದುಗೊಳಿಸುವಂತೆ ರಿಯಾಜ್ ಪರ ವಕೀಲರು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ಎನ್‌ಐಎ ಕೋರ್ಟ್ ಆರೋಪಿ 'ತಪ್ಪಿತಸ್ಥ' ಎಂದು ಘೋಷಿಸಿದೆ.
ರಿಯಾಜ್, ಭಯೋತ್ಪಾದಕ ಹಾಗೂ ಶ್ರೀಲಂಕಾದ ಈಸ್ಟರ್ ಬಾಂಬ್ ಸ್ಫೋಟದ ರೂವಾರಿ ಜಹ್ರಾನ್ ಹಾಶಿಮ್ ಎಂಬಾತನ ಅನುಯಾಯಿ. ಕೇರಳದಲ್ಲೂ ಇದೇ ರೀತಿಯ ಸ್ಫೋಟ ಸರಣಿಗೆ ಸಂಚು ರೂಪಿಸಿದ್ದ. ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಭಯೋತ್ಪಾದಕ ಗುಂಪಿಗೆ ಸೇರಿಸಿಕೊಳ್ಳಲು ಯತ್ನಿಸುತ್ತಿದ್ದ. ಈ ಬಗ್ಗೆ ಎನ್‌ಐಎ ಹಲವು ಪುರಾವೆಗಳನ್ನು ಸಂಗ್ರಹಿಸಿದೆ. ಅಫ್ಘಾನಿಸ್ತಾನಕ್ಕೆ ಹೋಗಿ ಭಯೋತ್ಪಾದಕರೊಂದಿಗೆ ಸೇರಿಕೊಂಡು ಕೇರಳದಲ್ಲಿ ಸರಣಿ ಆತ್ಮಾಹುತಿ ಬಾಂಬ್ ದಾಳಿಗೆ ಯೋಜಿಸಿದ್ದರ ಬಗ್ಗೆಯೂ ಮಾಹಿತಿ ಕಲೆ ಹಾಕಿದೆ. ಹೊಸ ವರ್ಷಾಚರಣೆ ವೇಳೆ ಆತ್ಮಾಹುತಿ ದಾಳಿ ನಡೆಸುವುದು ಈತನ ಗುರಿಯಾಗಿತ್ತು. ಈ ಉದ್ದೇಶಕ್ಕಾಗಿ ಹಲವು ಜನರನ್ನು ಸಂಪರ್ಕಿಸಿದ್ದಾನೆ. ದುಷ್ಕೃತ್ಯ ನಡೆಸಲು ಇತರರನ್ನು ಪ್ರಚೋದಿಸಲು ನಿರಂತರವಾಗಿ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಭಯೋತ್ಪಾದಕ ಜಹ್ರಾನ್ ಹಶೀಮ್ ಮತ್ತು ಇಸ್ಲಾಮಿಕ್ ವಾಗ್ಮಿ ಝಾಕಿರ್ ನಾಯಕ್ ಎಂಬಾತನ ಭಾಷಣಗಳನ್ನು ಆಲಿಸುತ್ತಿರುವುದಾಗಿ ವಿಚಾರಣೆಯ ವೇಳೆ ಒಪ್ಪಿಕೊಂಡಿರುವ ಬಗ್ಗೆ ತನಿಖಾ ಸಂಸ್ಥೆ ಮಾಹಿತಿ ನೀಡಿದೆ.