ಲಖನೌ (ಉತ್ತರ ಪ್ರದೇಶ):ಜೈಲಿನಲ್ಲಿದ್ದ ಗ್ಯಾಂಗ್‌ಸ್ಟರ್, ರಾಜಕಾರಣಿ, ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಗುರುವಾರ ಸಂಜೆ ನಿಧನರಾಗಿದ್ದು ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರುವ ಆತನ ಕುಟುಂಬಸ್ಥರು, ಅವರಿಗೆ ವಿಷಪ್ರಾಶನ ಮಾಡಲಾಗಿತ್ತು ಎಂಬ ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡುವಂತೆಯೂ ಅವರು ಆಗ್ರಹಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಜೈಲಿನಲ್ಲಿದ್ದಾಗ ಅವರು ವಿಷ ಸೇವಿಸಿರುವುದಾಗಿ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿ ಪತ್ರವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ತಾರ್ ಅವರ ಕಿರಿಯ ಪುತ್ರ ಒಮರ್ ಅನ್ಸಾರಿ ತಂದೆಯ ಸಾವಿನ ಕುರಿತು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಮ್ಮ ತಂದೆಯನ್ನು ಜಿಲ್ಲಾ ಕಾರಾಗೃಹದಿಂದ ನೇರವಾಗಿ ಪ್ರತ್ಯೇಕ ಬ್ಯಾರಕ್‌ಗೆ ಹಾಕಿದ್ದಾರೆ. ಅಲ್ಲದೇ ನನ್ನ ತಂದೆ ತನ್ನ ದುಃಸ್ಥಿತಿಯ ಬಗ್ಗೆ ಎರಡು ದಿನಗಳ ಹಿಂದೆ ದೂರವಾಣಿ ಮೂಲಕ ತಿಳಿಸಿದ್ದರು. ರಾತ್ರಿ ಮಾಧ್ಯಮಗಳ ಮೂಲಕ ಈ ಸಾವಿನ ಸುದ್ದಿ ತಿಳಿಯಿತು. ಅವರ ಈ ಸಾವಿನ ಬಗ್ಗೆ ಪೊಲೀಸರು ಸಹ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಇತ್ತೀಚೆಗಷ್ಟೇ ಅಪ್ಪನನ್ನು ನೋಡಲು ಕಾರಾಗೃಹಕ್ಕೆ ಭೇಟಿ ನೀಡಿದ್ದೆ. ಈ ವೇಳೆ ಅವರು ತಮಗೆ ವಿಷ ನೀಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ವಕೀಲರ ಮೂಲಕ ಪತ್ರ ಬರೆದು ಕೋರ್ಟ್‌ಗೂ ತಿಳಿಸಿದ್ದರು. ಹಾಗಾಗಿ ಅವರ ಸಾವಿನ ಕುರಿತು ವ್ಯಕ್ತವಾದ ಅನುಮಾನ ಬಗೆಹರಿಸುವ ಸಲುವಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ರಾಜಕೀಯ ದ್ವೇಷ ಹಾಗೂ ಉದ್ದೇಶಪೂರ್ವಕವಾಗಿ ತಮ್ಮನ್ನು ಅಪರಾಧ ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ. 2005 ರಿಂದ ಜೈಲುವಾಸ ಅನುಭವಿಸುತ್ತಿರುವೆ. ಬಾಂದಾ ಜೈಲಿನಲ್ಲಿ ತಮಗೆ ಜೀವ ಬೆದರಿಕೆ ಇದೆ. ಆಹಾರದಲ್ಲಿ ವಿಷ ಪದಾರ್ಥ ಬೆರೆಸಿ ಕೊಲೆ ಮಾಡುವ ಪ್ರಯತ್ನ ನಡೆದಿದೆ. ಇದಕ್ಕೂ ಮೊದಲು ಜೈಲಿನಲ್ಲಿಯೇ ಎರಡು ಬಾರಿ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಅರ್ಜಿದಾರರ ಪರ ಅವರ ವಕೀಲರು ಈ ತಿಂಗಳ ಆರಂಭದಲ್ಲಿ ಕೋರ್ಟ್‌ನಲ್ಲಿ ಹೇಳಿದ್ದರು. ಈ ಮನವಿ ಪತ್ರ ಇದೀಗ ಜಾಲತಾಣದಲ್ಲಿ ವೈರಲ್ ಆಗಿದೆ.
ಹತ್ಯೆಗೆ ಸಂಚು ಆರೋಪ:ತಮ್ಮ ಹತ್ಯೆಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಒಬ್ಬರು ಸಂಚು ರೂಪಿಸಿರುವುದಾಗಿ ಅಂತಾರಾಷ್ಟ್ರೀಯ ಮೂಲಗಳಿಂದ ತಿಳಿದು ಬಂದಿದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದು, ಪತ್ರದಲ್ಲಿ ಹಲವರ ಹೆಸರು ಕೂಡ ಪ್ರಸ್ತಾಪ ಮಾಡಿದ್ದಾರೆ. ಅರ್ಜಿದಾರರ ಹತ್ಯೆ ಸಂಚನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಅದೇ ರೀತಿ ಸರ್ಕಾರದ ಷಡ್ಯಂತ್ರದ ಭಾಗವಾಗಿ ಆರೋಪಿ ಪ್ರೇಮ್ ಪ್ರಕಾಶ್ ಸಿಂಗ್ ಅಲಿಯಾಸ್ ಮುನಾ ಬಜರಂಗಿಯನ್ನು ಜೈಲಿನೊಳಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದೂ ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಹೀಗೆ ಜೈಲಿನಲ್ಲಿ ಅನೇಕ ಜನರನ್ನು ಕೊಲ್ಲಲಾಗಿದೆ. ಅರ್ಜಿದಾರರ ಜೀವ ಉಳಿಸಬೇಕು. ಜೈಲು ಆಡಳಿತದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನ್ಯಾಯ ಮತ್ತು ಅರ್ಜಿದಾರರ ಜೀವನದ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕ್ರಮ ಅಗತ್ಯ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.