ನವದೆಹಲಿ:"ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು, ಜೊತೆಗೆ ದೇಶದ ಕ್ಷಮೆ ಕೋರಬೇಕು" ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಆಗ್ರಹಿಸಿದ್ದಾರೆ.
ಇಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, "ಅಂಬೇಡ್ಕರ್ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿಜವಾದ ಗೌರವವಿದ್ದರೆ ಗೃಹ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ಜನರು ಬೀದಿಗಿಳಿಯಲಿದ್ದಾರೆ" ಎಂದು ಎಚ್ಚರಿಸಿದರು.
"ಸಚಿವರಾದವರು ಸಂವಿಧಾನದ ಮೇಲೆ ಪ್ರಮಾಣ ಮಾಡುತ್ತಾರೆ. ಅದನ್ನು ರೂಪಿಸಿಕೊಟ್ಟ ಶಿಲ್ಪಿಗೆ ಅವಮಾನ ಮಾಡಿದವರಿಗೆ ಸಂಪುಟದಲ್ಲಿ ಉಳಿಯುವ ಹಕ್ಕಿಲ್ಲ. ಅಮಿತ್ ಶಾ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು" ಎಂದು ಒತ್ತಾಯಿಸಿದರು.
ಪ್ರಧಾನಿ ಬೆಂಬಲಕ್ಕೆ ಟೀಕೆ:"ಗೃಹ ಸಚಿವರನ್ನು ಬೆಂಬಲಿಸಿದ್ದಕ್ಕೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಗೃಹ ಸಚಿವರ ಹೇಳಿಕೆ ತಪ್ಪು ಎಂದು ಹೇಳುವ ಬದಲು, ಪ್ರಧಾನಿ ಮೋದಿ ಇದಕ್ಕೆ ಬೆಂಬಲ ನೀಡಿದ್ದಾರೆ. ಮೋದಿ ಮತ್ತು ಶಾ ಅವರು ಆತ್ಮೀಯ ಸ್ನೇಹಿತರಾಗಿದ್ದು, ಪರಸ್ಪರರ ತಪ್ಪುಗಳನ್ನು ಮರೆಮಾಚಲು ಪ್ರಯತ್ನಿಸುತ್ತಾರೆ" ಎಂದರು.
"ಹೇಳಿಕೆ ತಿರುಚಿದ ಕಾಂಗ್ರೆಸ್"- ಅಮಿತ್ ಶಾ:ತಮ್ಮ ಮೇಲೆ ಗುರುತರ ಆರೋಪ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಗೃಹ ಸಚಿವ ಅಮಿತ್ ಶಾ ಕಿಡಿಕಾರಿದ್ದಾರೆ. "ರಾಜ್ಯಸಭೆಯಲ್ಲಿ ನಾನು ನೀಡಿದ ಹೇಳಿಕೆಯನ್ನು ತಿರುಚಲಾಗುತ್ತಿದೆ. ಅಂಬೇಡ್ಕರ್ ಅವರನ್ನು ಎಂದಿಗೂ ಅವಮಾನ ಮಾಡದ ಪಕ್ಷದಿಂದ ನಾನು ಬಂದಿದ್ದೇನೆ" ಎಂದು ಹೇಳಿದರು.