ಕರ್ನಾಟಕ

karnataka

ETV Bharat / bharat

ರಾಜ್ಯದ ಅನುದಾನಕ್ಕೆ ತಡೆ: ಕೇಂದ್ರದ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ

ರಾಜ್ಯದ ವಿವಿಧ ಅನುದಾನಗಳನ್ನು ತಡೆಹಿಡಿಯುವ ಮತ್ತು ಸಾಲದ ಮಿತಿಯನ್ನು ಕಡಿತಗೊಳಿಸುವ ಕ್ರಮವನ್ನು ಕೇಂದ್ರ ಸರ್ಕಾರ ಕೈಬಿಡಬೇಕೆಂದು ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

kerala-assembly-passes-resolution-against-centre
ಕೇಂದ್ರದ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ

By ETV Bharat Karnataka Team

Published : Feb 2, 2024, 5:01 PM IST

ತಿರುವನಂತಪುರ (ಕೇರಳ): ರಾಜ್ಯದ ಆರ್ಥಿಕ ಕಾನೂನು ರಚನೆ ಅಧಿಕಾರಕ್ಕೆ ಕೇಂದ್ರ ಸರ್ಕಾರವು ಕೊಕ್ಕೆ ಹಾಕುತ್ತಿದೆ ಎಂದು ಆರೋಪಿಸಿ ಕೇರಳ ಸರ್ಕಾರ ಶುಕ್ರವಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ. ರಾಜ್ಯದ ಸಾಲದ ಮಿತಿಯನ್ನು ಕಡಿತಗೊಳಿಸುವ ಮತ್ತು ರಾಜ್ಯದ ವಿವಿಧ ಅನುದಾನಗಳನ್ನು ತಡೆಹಿಡಿಯುವ ಕ್ರಮದಿಂದ ಕೇಂದ್ರವು ದೂರವಿರಬೇಕು ಎಂದು ನಿರ್ಣಯವು ಒತ್ತಾಯಿಸಿದೆ.

ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್, ನಿಯಮ 118ರ ಅಡಿಯಲ್ಲಿ ನಿರ್ಣಯ ಮಂಡಿಸಿದರು. 15ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ನಿರ್ಲಕ್ಷಿಸಲಾಗಿದೆ. 2020-21ರಿಂದ ಪೂರ್ವಾನ್ವಯವಾಗುವಂತೆ ಸಾಲದ ಮಿತಿಯಲ್ಲಿ ಕಡಿತ ಮಾಡಲಾಗಿದೆ. ರಾಜ್ಯಕ್ಕೆ ಸಿಗದ ಬೇಕಾದ ಅನುದಾನದಲ್ಲಿ ಕಡಿತಗೊಳಿಸಿರುವುದು ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುವ ನಡೆಯಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಸಂವಿಧಾನವು ರಾಜ್ಯ ಸರ್ಕಾರದ ಆಡಳಿತಾತ್ಮಕ ಅಧಿಕಾರವನ್ನು ಖಾತರಿಪಡಿಸುತ್ತದೆ. ಸಾಲದ ಮಿತಿ ಕಡಿತಗೊಳಿಸುವ ಮತ್ತು ಅನುದಾನ ಕಡಿತಗೊಳಿಸುವ ಪ್ರಕ್ರಿಯೆಯಿಂದ ಕೇಂದ್ರ ಹಿಂದೆ ಸರಿಯಬೇಕು. ರಾಜ್ಯಗಳನ್ನು ಕೇಂದ್ರದ ಅಧೀನ ಅಂಶಗಳಂತೆ ನೋಡುವ ಧೋರಣೆ ಕೈಬಿಡಬೇಕು ಎಂದೂ ನಿರ್ಣಯದಲ್ಲಿ ಆಗ್ರಹಿಸಲಾಗಿದೆ.

15ನೇ ಹಣಕಾಸು ಆಯೋಗವು ರಾಜ್ಯದ ಅನುದಾನ ಪಾಲನ್ನು ನಿಗದಿಪಡಿಸಿದಾಗಲೂ ಭಾರಿ ನಷ್ಟ ಉಂಟಾಗಿದೆ. ಅದರ ಪ್ರಕಾರ ಸಿಗಬೇಕಾದ ಲಾಭಗಳನ್ನು ಕಡಿತಗೊಳಿಸಲಾಗಿದೆ ಎಂದು ನಿರ್ಣಯವು ಗಮನ ಸೆಳೆದಿದೆ. ಕೇಂದ್ರ ಸರ್ಕಾರದ ಹಸ್ತಕ್ಷೇಪವು ರಾಜ್ಯಗಳ ಎಲ್ಲ ಸಾಂವಿಧಾನಿಕ ಅಧಿಕಾರವನ್ನು ಕಸಿದುಕೊಳ್ಳುವ ರೀತಿಯಲ್ಲಿದೆ ಎಂದು ನಿರ್ಣಯದಲ್ಲಿ ದೂರಲಾಗಿದೆ.

ಮತ್ತೊಂದೆಡೆ, ಕೇಂದ್ರದ ಬಜೆಟ್‌ಗೆ ಗುರುವಾರ ಪ್ರತಿಕ್ರಿಯಿಸಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸರ್ಕಾರವು ಮತ್ತಷ್ಟು ಪ್ರಾದೇಶಿಕ ಅಸಮತೋಲನವನ್ನು ಸೃಷ್ಟಿಸುತ್ತಿದೆ ಎಂದು ಟೀಕಿಸಿದ್ದರು. ಕೇಂದ್ರ ಬಜೆಟ್​ನಲ್ಲಿ ಕೇರಳದ ಅಗತ್ಯತೆ ಮತ್ತು ಹಿತಾಸಕ್ತಿಗಳನ್ನು ಪರಿಗಣಿಸಿಲ್ಲ. ರಬ್ಬರ್ ಮತ್ತು ಇತರ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವ ಮೂಲಕ ದೇಶೀಯ ರಬ್ಬರ್ ಕೃಷಿಯನ್ನು ರಕ್ಷಿಸುವ ಬೇಡಿಕೆಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಕೇರಳದ ಭತ್ತ, ಬಾಳೆ, ಮಸಾಲೆ ಪದಾರ್ಥಗಳ ಬಗ್ಗೆ ಬಜೆಟ್​ನಲ್ಲಿ ಪ್ರಸ್ತಾಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಏಮ್ಸ್​ನಂತಹ ಹೊಸ ಸಂಸ್ಥೆಗಳನ್ನು ಪ್ರಕಟಿಸಿಲ್ಲ. ಹೊಸ ರೈಲುಗಳು, ಸಮೀಕ್ಷೆಗಳ ಬಗ್ಗೆ ಪ್ರಸ್ತಾಪಿಸಿಲ್ಲ. 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ಹೇಳುವ ಬಜೆಟ್​, ರಾಜ್ಯಗಳ ಸಬಲೀಕರಣದ ಮೂಲ ತತ್ವವನ್ನು ಮರೆತಿದೆ. ಬಜೆಟ್ ಮತ್ತು ಹಣಕಾಸಿನ ವಿಧಾನಗಳು ಪ್ರಾದೇಶಿಕ ಅಸಮತೋಲನ, ರಾಜ್ಯದ ಹಿತಾಸಕ್ತಿಗಳ ದುರ್ಬಲ, ಜನರನ್ನು ದಿವಾಳಿಗೊಳಿಸುತ್ತಿವೆ ಎಂದು ಸಿಎಂ ಪಿಣರಾಯಿ ದೂರಿದ್ದರು.

ಇದನ್ನೂ ಓದಿ:ನಟ ದಳಪತಿ ವಿಜಯ್ ರಾಜಕೀಯ ಪ್ರವೇಶ: ನೂತನ ಪಕ್ಷದ ಹೆಸರು ಘೋಷಣೆ

ABOUT THE AUTHOR

...view details