ನವದೆಹಲಿ:ಸರ್ಕಾರಕ್ಕೆ ಬಹುತವಿದ್ದರೂ ಆಪರೇಷನ್ ಕಮಲ ಆರೋಪದ ಹಿನ್ನೆಲೆಯಲ್ಲಿ ವಿಶ್ವಾಸಮತ ಯಾಚನೆ ಮಾಡಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿರೀಕ್ಷಿತವಾಗಿ ವಿಧಾನಸಭೆಯಲ್ಲಿ ಗೆಲುವು ಸಾಧಿಸಿದರು. ಜೊತೆಗೆ "2029ರಲ್ಲಿ ಬಿಜೆಪಿ ಮುಕ್ತ ದೇಶವನ್ನು ಎಎಪಿ ಕಟ್ಟಲಿದೆ" ಎಂದು ದೆಹಲಿ ಸಿಎಂ ಗುಡುಗಿದ್ದಾರೆ.
ದೆಹಲಿ ವಿಧಾನಸಭೆಯಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಬಜೆಟ್ ಅಧಿವೇಶನದ ಮೊದಲ ದಿನವೇ ಸಿಎಂ ಕೇಜ್ರಿವಾಲ್ ಅವರು ವಿಶ್ವಾಸಮತ ಯಾಚನೆ ನಿಲುವಳಿ ಮಂಡಿಸಿದರು. ಇಂದು ಅದರ ಮೇಲೆ ಚರ್ಚೆಗಳು ನಡೆದು, ಬಳಿಕ ಧ್ವನಿ ಮತದ ಮೂಲಕ ವಿಶ್ವಾಸ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ವೇಳೆ ಸದನದಲ್ಲಿದ್ದ 62 ಎಎಪಿ ಶಾಸಕರ ಪೈಕಿ 54 ಮಂದಿ ಸರ್ಕಾರದ ಪರ ಮತ ನೀಡಿದರೆ, ವಿಪಕ್ಷ ನಾಯಕರ ಒಂದು ಮತ ವಿರುದ್ಧವಾಗಿ ಬಿದ್ದಿತು. ಅಂದರೆ 54-1 ಅಂತರದಲ್ಲಿ ಸರ್ಕಾರ ಬಹುಮತ ಸಾಬೀತು ಮಾಡಿತು.
ವಿಶ್ವಾಸಮತ ಯಾಚನೆ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಆಪ್ ಸಂಚಾಲಕರೂ ಆಗಿರುವ ದೆಹಲಿ ಸಿಎಂ, ಆಪ್ ಪಕ್ಷವು ಬಿಜೆಪಿಗೆ ದೊಡ್ಡ ಸವಾಲಾಗಿದೆ. ಅದಕ್ಕಾಗಿಯೇ ಹೇಗಾದರೂ ಮಾಡಿ ನಮ್ಮನ್ನು ಮಣಿಸಲು ಪ್ರಯತ್ನ ಮಾಡಲಾಗುತ್ತಿದೆ. ಎಲ್ಲ ವಿಧಗಳಿಂದ ದಾಳಿ ನಡೆಸುತ್ತಿದೆ. ಈ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಕಮಲ ಪಕ್ಷ ಗೆದ್ದರೂ, 2029 ರ ಚುನಾವಣೆಯಲ್ಲಿ ಎಎಪಿ ದೇಶವನ್ನು ಬಿಜೆಪಿಯಿಂದ ಮುಕ್ತಗೊಳಿಸಲಿದೆ ಎಂದು ಕೇಜ್ರಿವಾಲ್ ಭವಿಷ್ಯ ನುಡಿದರು.