ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನಿರ್ವಹಿಸುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ದೆಹಲಿ ಮಾಜಿ ಸಿಎಂ, ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.
ತ್ಯಾಗರಾಜ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಆದಾಲತ್ನಲ್ಲಿ ಮಾತನಾಡಿದ ಅವರು, ಬಿಜೆಪಿ ಮಹಿಳೆಯರ ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸಿಲ್ಲ. ಆದರೆ, ನಮ್ಮ ಸರ್ಕಾರ ಎಲ್ಲಾ ಭರವಸೆಗಳನ್ನು ಪೂರೈಸಿತು ಎಂದರು.
10 ವರ್ಷದ ಹಿಂದೆ ದೆಹಲಿಯಲ್ಲಿನ ಶಾಲೆ, ಆಸ್ಪತ್ರೆ ಮತ್ತು ನೀರಿನ ಪೂರೈಕೆ ಸುಧಾರಣೆ ಜವಾಬ್ದಾರಿಯನ್ನು ನೀವು ನನಗೆ ನೀಡಿದ್ರಿ. ನಾನು ನನ್ನ ಕೆಲಸವನ್ನು ಮಾಡಿದೆ. ಆದರೆ, ಬಿಜೆಪಿ ಮತ್ತು ಅಮಿತ್ ಶಾ ಭದ್ರತೆ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ದೆಹಲಿ ಮಹಿಳೆಯರು ನನಗೆ ಮತಬ್ಯಾಂಕ್ ಅಲ್ಲ. ಅವರನ್ನು ನಾನು ನನ್ನ ಸಹೋದರಿಯರು ಮತ್ತು ತಾಯಿಯಂತೆ ನೋಡುತ್ತೇನೆ. ನನ್ನ ಅಧಿಕಾರದಲ್ಲಿ ಅವರ ಸುರಕ್ಷತೆಗಾಗಿ ಎಲ್ಲವನ್ನು ನಿರ್ವಹಿಸಿದ್ದೇನೆ. ಎಎಪಿ ಅಧಿಕಾರಕ್ಕೆ ಬರುವ ಮೊದಲು ನಗರದಲ್ಲಿ ಸಿಸಿಟಿವಿಗಳಿರಲಿಲ್ಲ. ನಾವು ಜನರ ಸುರಕ್ಷತೆಗಾಗಿ ಸಿಸಿಟಿವಿ ಮತ್ತು ಮಾರ್ಷಲ್ಗಳ ನೇಮಕ ಮಾಡಿದ್ದೇವೆ ಎಂದು ತಿಳಿಸಿದರು.