ಜಮ್ಮು: ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ (ಜೆಕೆಪಿಸಿಸಿ) ಮಾಜಿ ಅಧ್ಯಕ್ಷ ಮತ್ತು ಪಕ್ಷದ ಅಭ್ಯರ್ಥಿ ವಿಕರ್ ರಸೂಲ್ ವಾನಿ ಮತ್ತು ಇತರ ಐವರಿಗೆ ನ್ಯಾಯಾಲಯವು ಐದು ತಿಂಗಳ ಜೈಲು ಶಿಕ್ಷೆ ಮತ್ತು 1,000 ರೂ. ದಂಡ ವಿಧಿಸಿದ್ದು, ಕಾಂಗ್ರೆಸ್ ಪಕ್ಷ ತೀವ್ರ ಮುಜುಗರಕ್ಕೀಡಾಗಿದೆ. ವಿಕರ್ ರಸೂಲ್ ವಾನಿ ಸೆಪ್ಟೆಂಬರ್ 18 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಬನಿಹಾಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ಈ ಕ್ಷೇತ್ರದಲ್ಲಿ ಸೀಟು ಹಂಚಿಕೆಯ ಬಗ್ಗೆ ಒಪ್ಪಂದ ಮಾಡಿಕೊಳ್ಳಲು ವಿಫಲವಾದ ನಂತರ, ನ್ಯಾಷನಲ್ ಕಾನ್ಫರೆನ್ಸ್ (ಎನ್ ಸಿ) ಮತ್ತು ಕಾಂಗ್ರೆಸ್ ಸ್ನೇಹಪರ ಸ್ಪರ್ಧೆಗಾಗಿ ಈ ಕ್ಷೇತ್ರದಿಂದ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಮತ್ತು ಬನಿಹಾಲ್ ಕ್ಷೇತ್ರದ ನಾಮಪತ್ರಗಳ ಪರಿಶೀಲನೆ ಈಗಾಗಲೇ ಮುಗಿದಿರುವುದರಿಂದ, ಒಂದೊಮ್ಮೆ ವಾನಿ ಅನರ್ಹಗೊಂಡರೆ, ಎನ್ ಸಿ ಅಭ್ಯರ್ಥಿ ಸಜ್ಜಾದ್ ಶಾಹೀನ್ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಇರಲಿದೆ.
2012 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಬನಿಹಾಲ್ ನ ಮಿತೇಪುರ್ ಗ್ರಾಮದ ಜೂನಿಯರ್ ಹೈಸ್ಕೂಲ್ನಲ್ಲಿ ಅನುಮತಿಯಿಲ್ಲದೇ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯನ್ನುದ್ದೇಶಿಸಿ ಮಾಜಿ ಶಾಸಕ ವಾನಿ ಮಾತನಾಡಿದ್ದರು. ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಆಗಿನ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಸಿಯಾರಾಮ್ ವರ್ ಷ್ನಿ ಅವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.
ಆರೋಪಿಗಳು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಸಾಬೀತಾಗಿದೆ ಎಂದು ಹೇಳಿದ ಕೋರ್ಟ್ ವಿಕರ್ ರಸೂಲ್ ವಾನಿ, ಭರತ್ ಭೂಷಣ್ ಶರ್ಮಾ, ಸಚಿನ್, ಇಕ್ರಮುದ್ದೀನ್ ಮತ್ತು ನಜೀಮ್ ಅವರಿಗೆ ಐದು ತಿಂಗಳ ಜೈಲು ಶಿಕ್ಷೆ ಮತ್ತು ತಲಾ 1,000 ರೂ. ದಂಡ ವಿಧಿಸಿದೆ.