ಕರ್ನಾಟಕ

karnataka

ETV Bharat / bharat

20 ವರ್ಷಗಳ ಬಳಿಕ ಹಿಮಾಚಲದಲ್ಲಿ ಪತ್ತೆಯಾದ ಕರ್ನಾಟಕದ ಸಾಕಮ್ಮ: ರಾಜ್ಯಕ್ಕೆ ಕರೆತರುತ್ತಿದೆ ಅಧಿಕಾರಿಗಳ ತಂಡ - KARNATAKA SAKAMMA

ಬರೋಬ್ಬರಿ 20 ವರ್ಷಗಳ ನಂತರ ಕರ್ನಾಟಕದ ವಿಜಯನಗರ ಜಿಲ್ಲೆಯ ಮಹಿಳೆ ಸಾಕಮ್ಮ ಎಂಬುವವರು ಹಿಮಾಚಲ ರಾಜ್ಯದ ವೃದ್ಧಾಶ್ರಮವೊಂದರಲ್ಲಿ ಪತ್ತೆಯಾಗಿದ್ದು, ಇದೀಗ ತಮ್ಮ ಕುಟುಂಬವನ್ನು ಸೇರಿದ್ದಾರೆ. ಮನಕಲಕುವ ಸಾಕಮ್ಮನ ನೈಜ್ಯ ಕಥೆ ಇಲ್ಲಿದೆ ನೋಡಿ.

KARNATAKA WOMAN SAKAMMA  SAKAMMA CAME BACK HOME  WHO IS SAKAMMA  SAKAMMA ALIVE IN HIMACHAL
20 ವರ್ಷಗಳ ನಂತರ ಹಿಮಾಚಲದಲ್ಲಿ ಪತ್ತೆಯಾದ ಕರ್ನಾಟಕದ ಸಾಕಮ್ಮ: ಈಕೆಯ ಪತ್ತೆಯೇ ರೋಚಕ! (ETV Bharat)

By ETV Bharat Karnataka Team

Published : Dec 25, 2024, 12:22 PM IST

ಮಂಡಿ(ಹಿಮಾಚಲ ಪ್ರದೇಶ):20 ವರ್ಷಗಳ ನಂತರ ಕರ್ನಾಟಕದ ಮಹಿಳೆ ಹಿಮಾಚಲ ರಾಜ್ಯದಲ್ಲಿ ಪತ್ತೆಯಾಗಿದ್ದಾರೆ. ಇದು ಸಿನಿಮಾ ಕಥೆಯಲ್ಲ. ಹಿಮಾಚಲ ಸರ್ಕಾರದ ಅಧಿಕಾರಿಯೊಬ್ಬರ ಸತತ ಪ್ರಯತ್ನ ಇಂದು ಆ ವೃದ್ಧೆಯನ್ನು ತನ್ನ ಕೊನೆಗಾಲದಲ್ಲಿ ಕುಟುಂಬವನ್ನು ಸೇರುವಂತೆ ಮಾಡಿದೆ. ಮಹಿಳೆಯ ಪುಣ್ಯವೋ, ಆಕೆಯ ಮಕ್ಕಳ ಭಾಗ್ಯವೋ ಸದ್ಯ ನಿನ್ನೆ ಕರ್ನಾಟಕದ ತನ್ನ ಮನೆಗೆ ಮಹಿಳೆ ಸುರಕ್ಷಿತವಾಗಿ ಸೇರಿಕೊಂಡಿದ್ದಾರೆ.

ಈ ಮಹಿಳೆಯ ಹೆಸರು ಸಾಕಮ್ಮ. ಮೊದಲೇ ಹೇಳಿದಂತೆ 20 ವರ್ಷಗಳ ಹಿಂದೆ ತನ್ನ ಮನೆ, ಪತಿ, ಮಕ್ಕಳಿಂದ ದೂರವಾಗಿದ್ದರು. ಇಷ್ಟು ದೀರ್ಘ ಸಮಯದ ನಂತರ ಮಹಿಳೆ ಪತ್ತೆಯಾಗಿದ್ದರೂ ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್​ ಸ್ಟೋರಿ.

ಡಿಸೆಂಬರ್ 18 ರಂದು ಮಂಡಿಯ ಎಡಿಸಿ ರೋಹಿತ್​ ರಾಥೋಡ್ ಅವರು ಜಿಲ್ಲೆಯ ವೃದ್ಧಾಶ್ರಮವಾದ ಭಂಗ್ರೋಟುಗೆ ತಪಾಸಣೆಗೆ ಎಂದು ಬಂದಿದ್ದರು. ಅಲ್ಲಿ ವೃದ್ಧಾಶ್ರಮದ ದಾಖಲೆಗಳಲ್ಲಿ ಸಾಕಮ್ಮ ಎಂಬ ಒಬ್ಬ ವೃದ್ಧಯನ್ನು ಕಂಡಿದ್ದಾರೆ.

ಹಿಮಾಚಲದ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದ ಸಾಕಮ್ಮ (ETV Bharat)

ಇತರ ಅಧಿಕಾರಿಗಳ ಸಹಾಯದಿಂದ ಮನೆಯವರೊಂದಿಗೆ ಸಂಪರ್ಕ:ಈ ವೇಳೆ ಮಹಿಳೆ ಮೂಲತಃ ಕರ್ನಾಟಕದವರಾಗಿದ್ದು, ಹಿಂದಿ ಮಾತನಾಡುವುದಿಲ್ಲ ಎಂದು ತಿಳಿದು ಬಂದಿದೆ. ತಕ್ಷಣ ಅಧಿಕಾರಿ ಜಿಲ್ಲೆಯ ಇತರ ಅಧಿಕಾರಿಗಳೊಂದಿಗೆ ಮಾತನಾಡಿ ಸಾಕಮ್ಮನನ್ನು ಆಕೆಯ ಮನೆಗೆ ಕಳುಹಿಸಲು ಕಾರ್ಯಾಚರಣೆ ನಡೆಸಿದ್ದಾರೆ. ಮೊದಲು ಹಿಮಾಚಲದಲ್ಲಿನ ಕರ್ನಾಟಕದ ಅಧಿಕಾರಿಗಳ ಸಹಾಯ ಪಡೆದು ಸಾಕಮ್ಮನ ಜೊತೆ ಮಾತನಾಡುವಂತೆ ಮಾಡಿದ್ದಾರೆ.

ಸಾಕಮ್ಮನ ಮೂವರು ಮಕ್ಕಳು. (ETV Bharat)

ಕರ್ನಾಟಕದ ನಿವಾಸಿಯಾದ ಹಿಮಾಚಲದ ಕಂಗ್ರಾ ಜಿಲ್ಲೆಯ ಪಾಲಂಪೂರ್‌ನ ಎಸ್‌ಡಿಎಂ ನೇತ್ರಾ ಮೈತಿ ಸಾಕಮ್ಮನೊಂದಿಗೆ ದೂರವಾಣಿ ಮೂಲಕ ಕನ್ನಡದಲ್ಲಿ ಮಾತನಾಡಿ, ಆಕೆಯ ಮನೆಯ ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ಮಂಡಿ ಜಿಲ್ಲೆಯಲ್ಲಿ ನಿಯೋಜನೆಗೊಂಡಿದ್ದ ಐಪಿಎಸ್ ಪ್ರೊಬೇಷನರ್ ಅಧಿಕಾರಿ ರವಿ ನಂದನ್ ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಮೂಲಕ ಮತ್ತೊಮ್ಮೆ ಸಾಕಮ್ಮ ಅವರನ್ನು ಮಾತನಾಡಿಸಿದ್ದಾರೆ. ಈ ಮಹಿಳೆಯ ವಿಡಿಯೋವನ್ನು ಮಾಡಿ ಕರ್ನಾಟಕದ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಬಳಿಕ ಹಿಮಾಚಲ ಪ್ರದೇಶ ಮತ್ತು ಕರ್ನಾಟಕದ ಅಧಿಕಾರಿಗಳ ಪ್ರಯತ್ನದಿಂದ ಸಾಕಮ್ಮನ ಕುಟುಂಬ ಪತ್ತೆಯಾಗಿದೆ. ಸಾಕಮ್ಮ ಕರ್ನಾಟಕದ ವಿಜಯನಗರ ಜಿಲ್ಲೆಯ ಡಣಾಯಕನಕೆರೆ ಗ್ರಾಮದ ನಿವಾಸಿಯೆಂದು ತಿಳಿದು ಬಂತು. ನಿಖರ ಮಾಹಿತಿ ಬಳಿಕ ಕರ್ನಾಟಕದ ಅಧಿಕಾರಿಗಳ ತಂಡವು ಸಾಕಮ್ಮನನ್ನು ಅವರ ಮನೆಗೆ ಕರೆದೊಯ್ಯಲು ಹಿಮಾಚಲಕ್ಕೆ ಆಗಮಿಸಿತು.

ಈ ಬಗ್ಗೆ ಮಂಡಿ ಜಿಲ್ಲಾಧಿಕಾರಿ ಹೇಳಿದ್ದಿಷ್ಟು:ಮಂಡಿ ಜಿಲ್ಲಾಧಿಕಾರಿ ಅಪೂರ್ವ ದೇವಗನ್ ಮಾತನಾಡಿ, "ವೃದ್ಧಾಶ್ರಮ, ಅನಾಥಾಶ್ರಮಗಳನ್ನು ಕಾಲಕಾಲಕ್ಕೆ ತಪಾಸಣೆ ಮಾಡಲಾಗುತ್ತಿದ್ದು, ಇತ್ತೀಚೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರಿಂದ ಭಂಗ್ರೋಟು ಅನಾಥಾಶ್ರಮವನ್ನು ಪರಿಶೀಲನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅವರು ಕರ್ನಾಟಕದ ಮಹಿಳೆಯೊಂದಿಗೆ ಮಾತನಾಡಿದ್ದಾರೆ. ಆದರೆ ಅವರ ವಿಳಾಸ ಗೊತ್ತಾಗಿರಲಿಲ್ಲ . ನಂತರ ಜಿಲ್ಲಾಡಳಿತ ಕರ್ನಾಟಕದ ಅಧಿಕಾರಿಗಳ ಜೊತೆ ಸೇರಿ ವೃದ್ಧೆಯನ್ನ ಮನೆಗೆ ಕಳುಹಿಸಲು ಪ್ರಯತ್ನ ಮಾಡಿದೆವು, ಅದು ಕೊನೆಗೆ ಯಶಸ್ವಿಯಾಗಿದೆ" ಎಂದು ತಿಳಿಸಿದ್ದಾರೆ.

ಸಾಕಮ್ಮನನ್ನು ಪತ್ತೆ ಮಾಡಿ ಗೂಡು ಸೇರಿಸಿದ ಅಧಿಕಾರಿಗಳ ತಂಡ (ETV Bharat)

ಸಾಕಮ್ಮ 20 ವರ್ಷಗಳ ಹಿಂದೆ ಕರ್ನಾಟಕದಿಂದ ಉತ್ತರ ಭಾರತಕ್ಕೆ ಬಂದಿದ್ದರು, ಬಡತನದ ಜೀವನ ನಡೆಸುತ್ತಿದ್ದರು. ಬಳಿಕ ಹಿಮಾಚಲಕ್ಕೆ ತಲುಪಿದ ಸಾಕಮ್ಮ ಅನೇಕ ಆಶ್ರಮಗಳಲ್ಲಿ ಆಶ್ರಯ ಪಡೆದುಕೊಂಡಿದ್ದರು . ಹಿಮಾಚಲದಿಂದ ಕರ್ನಾಟಕಕ್ಕೆ ಸುಮಾರು 2 ಸಾವಿರ ಕಿಲೋಮೀಟರ್ ದೂರವಿದೆ. ಆದರೆ, ಅಲ್ಲಿಗೆ ಸಾಕಮ್ಮ ಇಲ್ಲಿಗೆ ಹೇಗೆ ತಲುಪಿದರು ತಿಳಿಯಬೇಕಷ್ಟೆ.

ಸಾಕಮ್ಮ ಅವರಿಗೆ ಮೂವರು ಮಕ್ಕಳು: ಸಾಕಮ್ಮ ಅವರಿಗೆ ನಾಲ್ಕು ಮಕ್ಕಳಿದ್ದರು, ಅದರಲ್ಲಿ ಮೂವರು ಮಾತ್ರ ಈಗ ಬದುಕಿದ್ದಾರೆ ಮತ್ತು ಮದುವೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಾಕಮ್ಮ ಅವರ ಪತಿಯೂ ತೀರಿಹೋಗಿದ್ದಾರೆ. ಸಾಕಮ್ಮ ತನ್ನ ಕುಟುಂಬದಿಂದ ಬೇರ್ಪಟ್ಟಾಗ, ಅವಳ ಮಕ್ಕಳು ಚಿಕ್ಕವರಾಗಿದ್ದರು.

ಹಿಮಾಚಲ ಸರ್ಕಾರಕ್ಕೆ ತಮ್ಮ ಸರ್ಕಾರದ ಪರವಾಗಿ ಕೃತಜ್ಞತೆ ಸಲ್ಲಿಸಿದ ಕರ್ನಾಟಕದ ಅಧಿಕಾರಿ ಬಸವರಾಜ್ ಎನ್.ಜಿ, "ಸಾಕಮ್ಮ ಅವರನ್ನು ಮನೆಗೆ ತಲುಪಿಸಲು ಹಿಮಾಚಲದ ಎಲ್ಲ ಅಧಿಕಾರಿಗಳು ನಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ. 20 ವರ್ಷಗಳ ನಂತರ ಸಾಕಮ್ಮ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. ಸಾಕಮ್ಮನ ಮೂವರು ಮಕ್ಕಳು ಕರ್ನಾಟಕದಲ್ಲಿ ಅವಳಿಗಾಗಿ ಕಾಯುತ್ತಿದ್ದಾರೆ. ಸಾಕಮ್ಮ ಸತ್ತಿದ್ದಾಳೆ ಎಂದು ಭಾವಿಸಿ ಕುಟುಂಬಸ್ಥರು ಶವಸಂಸ್ಕಾರ ಮಾಡಿದ್ದರು" ಎಂಬ ವಿಚಾರವನ್ನು ತಿಳಿಸಿದ್ದಾರೆ.

ಇದನ್ನೂ ಓದಿ:ಕಾಣೆಯಾಗಿದ್ದ ಬಳ್ಳಾರಿಯ ಮಹಿಳೆ 20 ವರ್ಷದ ಬಳಿಕ ಪತ್ತೆ ; ಮರಳಿ ಮನೆಗೆ ಕರೆತರಲಿದ್ದಾರೆ ಅಧಿಕಾರಿಗಳು

ABOUT THE AUTHOR

...view details