ರಾಂಚಿ:ಜಾರ್ಖಂಡ್ನ ಮೊದಲ ಹಂತದ ಮತದಾನದಲ್ಲಿ ಮಾವೋವಾದಿ ಪೀಡಿತ ಪ್ರದೇಶದಲ್ಲಿ ಮತದಾನ ಬಿರುಸಿನಿಂದ ಸಾಗಿದೆ. ಚುನಾವಣೆ ಬಹಿಷ್ಕರಿಸುವಂತೆ ಮಾವೋವಾದಿಗಳ ಎಚ್ಚರಿಕೆ ನಡುವೆಯೂ ಜನರು ಮತಗಟ್ಟೆಗಳಿಗೆ ಬಂದು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೊಹರ್ಪುರ್ ವಿಧಾನಸಭಾ ಕ್ಷೇತ್ರದಲ್ಲಿನ ರಬಂಗ ಗ್ರಾಮದಲ್ಲಿ ಮತ ಕೇಂದ್ರದ ಗೇಟ್ ಮುಂದೆಯೇ ಚುನಾವಣೆ ಬಹಿಷ್ಕಾರ ಮಾಡುವಂತೆ ಮವೋವಾದಿಗಳು ಪೋಸ್ಟರ್ ಲಗತ್ತಿಸಿದ್ದರು. ಜೊತೆಗೆ ಬಾಂಬ್ ದಾಳಿ ಬೆದರಿಕೆ ಒಡ್ಡಿದ್ದರು. ಇದರಿಂದಾಗಿ ಇಲ್ಲಿ ಮತದಾನ ಆರಂಭ ವಿಳಂಬವಾಯಿತು. ಮತಗಟ್ಟೆ ಅಧಿಕಾರಿಗಳು ಪೋಸ್ಟರ್ ತೆಗೆದು ಹಾಕಿದರು. ಹಾಗೇ ಅನುಮಾನಾಸ್ಪದ ವಸ್ತು ಪತ್ತೆಗೆ ಸ್ನಿಫರ್ ಡಾಗ್ ಮತ್ತು ಬಾಂಬ್ ಸ್ಕ್ವಾಡ್ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಪರಿಣಾಮವಾಗಿ ಅರ್ಧ ಗಂಟೆ ವಿಳಂಬವಾಗಿ ಮತದಾನ ಆರಂಭವಾಯಿತು. ಮತದಾನ ಆರಂಭವಾಗುತ್ತಿದ್ದಂತೆ ನೂರಾರು ಮತದಾರರು ಮತಚಲಾವಣೆಗೆ ಆಗಮಿಸಿದರು.
ಈ ಕುರಿತು ಮಾತನಾಡಿದ ಎಸ್ಪಿ ಅಶುತೋಷ್ ಶೇಖರ್, ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕಾಗಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಈ ನಡುವೆ ನಕ್ಸಲರು ಜಗನ್ನಾಥಪುರ ವಿಧಾನಸಭಾ ಕ್ಷೇತ್ರದ ಛೋಟಾನಗರ ಪೊಲೀಸ್ ಠಾಣೆಯ ಬಳಿಯ ಹತ್ತನಬುರ್ ಮತ್ತು ದುಕುಪೊಂಗ ಗ್ರಾಮದಲ್ಲಿ ರಸ್ತೆ ಮಾರ್ಗವನ್ನು ಬಂದ್ ಮಾಡಿದ್ದರು. ಬಳಿಕ ಪೊಲೀಸರು ರಸ್ತೆಯ ಸಂಚಾರಕ್ಕೆ ಅಡ್ಡವಾಗಿರಿಸಿದ್ದ ಮರದ ತುಂಡುಗಳನ್ನು ತೆಗೆದು ಹಾಕಿದರು. ಅನೇಕ ಕಡೆ ಮಾವೋವಾದಿಗಳು ಪೋಸ್ಟರ್ ಮತ್ತು ಬ್ಯಾನರ್ಗಳು ಕಂಡು ಬಂದವು.