ರಾಂಚಿ(ಜಾರ್ಖಂಡ್):ಜಾರ್ಖಂಡ್ ವಿಧಾನಸಭೆ ಚುನಾವಣೆಯ 43 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಇಂದು ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗುತ್ತದೆ. ಶಾಂತಿಯುತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಸೂಕ್ತ ವ್ಯವಸ್ಥೆ ಮಾಡಿರುವುದಾಗಿ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ರಾಜ್ಯ ರಾಜಧಾನಿ ರಾಂಚಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 43 ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಮತದಾನವಾಗಲಿದೆ. 1,37,10,717 ಮತದಾರರು ಚುನಾವಣೆಗೆ ಸ್ಪರ್ಧಿಸಿರುವ ಒಟ್ಟು 683 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
"ಚುನಾವಣೆ ಬಗ್ಗೆ ಯಾವುದೇ ಭಯ, ಆತಂಕ ಇಲ್ಲ. ಬೆಳಗ್ಗೆ 5.30ಕ್ಕೆ ಅಣಕು ಮತದಾನ ನಡೆಸಿ ಆಯೋಗದ ಸೂಚನೆಯಂತೆ ಮತದಾನ ಕಾರ್ಯ ಆರಂಭಿಸಲಾಗುವುದು. ಇವಿಎಂಗಳನ್ನು ಸಂಗ್ರಹಿಸುವಲ್ಲಿನ ಅನಗತ್ಯ ಸಮಯ ಹಾಳು ಮತ್ತು ಸಮಸ್ಯೆಯನ್ನು ತಪ್ಪಿಸಲು ಸ್ಟ್ರಾಂಗ್ ರೂಂನಲ್ಲಿ ಟೋಕನ್ ವ್ಯವಸ್ಥೆ ಮಾಡಲಾಗಿದೆ" ಎಂದು ರಾಂಚಿ ಉಪ ಅಭಿವೃದ್ಧಿ ಆಯುಕ್ತ ದಿನೇಶ್ ಯಾದವ್ ಹೇಳಿದ್ದಾರೆ.
"ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಸುಮಾರು 10 ಸಾವಿರ ಚುನಾವಣಾ ಸಿಬ್ಬಂದಿ ಮತಗಟ್ಟೆಗೆ ತೆರಳಿದ್ದಾರೆ. ಮೊದಲ ಹಂತದಲ್ಲಿ ಒಟ್ಟು ಮತದಾರರಲ್ಲಿ 68,73,455 ಪುರುಷರು, 68,36,959 ಮಹಿಳೆಯರು ಮತ್ತು 303 ತೃತೀಯ ಲಿಂಗಿಗಳು ತಮ್ಮ ಹಕ್ಕನ್ನು ಚಲಾಯಿಸಲು ಅರ್ಹತೆ ಹೊಂದಿದ್ದಾರೆ" ಎಂದು ತಿಳಿಸಿದರು.