ನವದೆಹಲಿ:ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸಿದ 2024ನೇ ಸಾಲಿನ ಮುಖ್ಯ ಜಂಟಿ ಪ್ರವೇಶ ಪರೀಕ್ಷೆ(ಜೆಇಇ) ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. 23 ಅಭ್ಯರ್ಥಿಗಳು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ಇದರಲ್ಲಿ ತೆಲಂಗಾಣದವರೇ ಹೆಚ್ಚಾಗಿದ್ದಾರೆ.
ಮುಖ್ಯ ಪರೀಕ್ಷೆಯ ಮೊದಲ ಆವೃತ್ತಿಯಲ್ಲಿ 11.70 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಇದರಲ್ಲಿ ತೆಲಂಗಾಣದ 7, ಹರಿಯಾಣದ ಇಬ್ಬರು, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದ ತಲಾ ಮೂವರು, ದೆಹಲಿಯ ಇಬ್ಬರು, ಗುಜರಾತ್, ಕರ್ನಾಟಕ ಮತ್ತು ತಮಿಳುನಾಡಿನಿಂದ ತಲಾ ಒಬ್ಬರು ಪೂರ್ಣ ಅಂಕ ಪಡೆದು ಟಾಪರ್ ಆಗಿದ್ದಾರೆ.
ಕೀ ಉತ್ತರ ಬಿಡುಗಡೆ:ಏಜೆನ್ಸಿಯು ತನ್ನ ವೆಬ್‌ಸೈಟ್‌ನಲ್ಲಿ ಜೆಇಇ ಮುಖ್ಯ ಪರೀಕ್ಷೆ ಮೊದಲ ಆವೃತ್ತಿಯ ಕೀ ಉತ್ತರಗಳನ್ನು ಅಪ್ಲೋಡ್ ಮಾಡಿದೆ. ಅಂತಿಮ ಉತ್ತರಗಳಲ್ಲಿ 6 ಪ್ರಶ್ನೆಗಳನ್ನು ಕೈಬಿಡಲಾಗಿದೆ. ಫೆಬ್ರವರಿ 6 ರಂದು ತಾತ್ಕಾಲಿಕ ಉತ್ತರಗಳನ್ನು ಬಿಡುಗಡೆ ಮಾಡಲಾಗಿದ್ದು, ಫೆಬ್ರವರಿ 9 ರವರೆಗೆ ಅಭ್ಯರ್ಥಿಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಪರೀಕ್ಷೆಯು ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ನಡೆದಿದೆ. ದೇಶವಲ್ಲದೇ, ವಿದೇಶದಲ್ಲೂ ಅಂದರೆ, ಮನಾಮಾ, ದೋಹಾ, ದುಬೈ, ಕಠ್ಮಂಡು, ಮಸ್ಕತ್, ರಿಯಾದ್, ಶಾರ್ಜಾ, ಸಿಂಗಾಪುರ್, ಕುವೈತ್ ಸಿಟಿ, ಕೌಲಾಲಂಪುರ್, ಲಾಗೋಸ್/ಅಬುಜಾ, ಕೊಲಂಬೊ, ಜಕಾರ್ತ, ಮಾಸ್ಕೋ, ಒಟ್ಟಾವಾ, ಪೋರ್ಟ್ ಲೂಯಿಸ್, ಬ್ಯಾಂಕಾಕ್ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ಪರೀಕ್ಷೆ ನಡೆಸಲಾಗಿತ್ತು.
ಪರೀಕ್ಷೆಯ ಎರಡನೇ ಆವೃತ್ತಿಯನ್ನು ಏಪ್ರಿಲ್‌ನಲ್ಲಿ ನಿಗದಿಪಡಿಸಲಾಗಿದೆ. ಜೆಇಇ ಮೇನ್ಸ್ ಪೇಪರ್ 1 ಮತ್ತು ಪೇಪರ್ 2 ರ ಫಲಿತಾಂಶಗಳ ಆಧಾರದ ಮೇಲೆ, ಅಭ್ಯರ್ಥಿಗಳನ್ನು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಹಾಜರಾಗಲು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಜೆಇಇ ಪರೀಕ್ಷೆಯು ದೇಶದ 23 ಪ್ರಮುಖ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ (ಐಐಟಿ) ಪ್ರವೇಶ ಪಡೆಯಲು ಇರುವ ಮಾನದಂಡವಾಗಿದೆ.
ಫಲಿತಾಂಶವನ್ನು ಹೀಗೆ ನೋಡಿ
- tojeemain.nta.ac.in ವೆಬ್ಸೈಟ್ಗೆ ಹೋಗಿ ಕ್ಲಿಕ್ ಮಾಡಿ
- JEE ಮೇನ್ಸ್ 2024 ಸೆಷನ್ 1 ಸ್ಕೋರ್‌ಕಾರ್ಡ್ ಡೌನ್‌ಲೋಡ್ ಲಿಂಕ್ ತೆರೆಯಿರಿ
- ನಿಮ್ಮ ಅಪ್ಲಿಕೇಶನ್ ಸಂಖ್ಯೆ, ಜನ್ಮ ದಿನಾಂಕವನ್ನು ನಮೂದಿಸಿ ಮತ್ತು ಲಾಗ್ ಇನ್ ಆಗಿ
- ಬಳಿಕ ನಿಮ್ಮ ಫಲಿತಾಂಶದ ಪೇಜ್ ಓಪನ್ ಆಗುತ್ತದೆ, ಆ ಬಳಿಕ ರಿಸಲ್ಟ್ ಪರಿಶೀಲಿಸಬಹುದಾಗಿದೆ.
ಇದನ್ನೂ ಓದಿ: ರಕ್ಷಣಾ ಇಲಾಖೆಯಲ್ಲಿ ನೇಮಕಾತಿ; ಎಸ್ಎಸ್ಎಲ್ಸಿ ಪಾಸಾದವರಿಗೆ ಅವಕಾಶ