ಹಾವೇರಿ: ಬಹುತೇಕ ಹೆಣ್ಣುದೇವರಿಗೆ ಭಕ್ತರು ನೈವೇದ್ಯ ರೂಪದಲ್ಲಿ ಕುರಿ, ಕೋಳಿಗಳನ್ನು ಅರ್ಪಿಸುವುದುಂಟು. ಇನ್ನು ಕೆಲವೆಡೆ ದುರ್ಗಾದೇವಿಗೆ ಕೋಣ ಬಲಿ ನೀಡುವ ಸಂಪ್ರದಾಯವೂ ಇದೆ. ಇತ್ತೀಚೆಗೆ ಪ್ರಾಣಿ ದಯಾ ಸಂಘದ ಹೋರಾಟದ ಫಲವಾಗಿ ಪ್ರಾಣಿಬಲಿ ಕಡಿಮೆಯಾಗಿದೆ. ಇದೇ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಬಂಕಾಪುರದ ದೇವಿ ಜಾತ್ರೆ ವಿಶಿಷ್ಟವಾಗಿದೆ.
ಈ ಜಾತ್ರೆಯಲ್ಲಿ ಯಾವುದೇ ಪ್ರಾಣಿಬಲಿ ನಡೆಯುವುದಿಲ್ಲ. ಭಕ್ತರು ದೇವಿಗೆ ಕುರಿ, ಕೋಳಿ, ಕೋಣ ಸೇರಿದಂತೆ ಯಾವುದೇ ಪ್ರಾಣಿಯ ರಕ್ತದ ನೈವೇದ್ಯ ಕೊಡುವುದಿಲ್ಲ. ಪ್ರಾಣಿ ಬಲಿ ಬದಲು ಸಿಹಿ ಪದಾರ್ಥವನ್ನು ಅರ್ಪಿಸಲಾಗುತ್ತದೆ. ಮಾದಲಿ, ಗೋದಿಹುಗ್ಗಿ, ಬೂಂದಿ ಸೇರಿದಂತೆ ಸಿಹಿ ಪದಾರ್ಥಗಳು ಹಾಗೂ ಹಣ್ಣುಕಾಯಿ ನೈವೇದ್ಯ ಕೊಟ್ಟರೆ ದುರ್ಗಾದೇವಿ ಪ್ರಸನ್ನಳಾಗುತ್ತಾಳೆ ಎನ್ನುತ್ತಾರೆ ಭಕ್ತರು.
1987ರಿಂದಲೂ ಇಲ್ಲಿ ಜಾತ್ರೋತ್ಸವ ಆಯೋಜಿಸಿಕೊಂಡು ಬರಲಾಗುತ್ತಿದೆ. ಜಾತ್ರೆಯ ಪ್ರಯುಕ್ತ ಮೂರು ದಿನಗಳವರೆಗೆ ಬಯಲು ಜಂಗಿ ಕುಸ್ತಿ ಪಂದ್ಯಾವಳಿ ನಡೆಸಲಾಗುತ್ತದೆ. ರಾಜ್ಯ, ನೆರೆ ರಾಜ್ಯಗಳಿಂದ ಫೈಲ್ವಾನರು ಆಗಮಿಸಿ, ಕುಸ್ತಿಯಲ್ಲಿ ಪಾಲ್ಗೊಳ್ಳುತ್ತಾರೆ.
ಗರಡಿಮನೆಯಲ್ಲಿ ತಾಲೀಮು ಮಾಡಿದ ಜಗಜಟ್ಟಿಗಳು ತಮ್ಮ ಕಟ್ಟುಮಸ್ತಾದ ದೇಹ ಪ್ರದರ್ಶನ ಮಾಡುತ್ತಾರೆ. ವಿವಿಧ ಪಟ್ಟುಗಳನ್ನು ಹಾಕಿ ಎದುರಾಳಿಗೆ ಸೋಲಿನ ರುಚಿ ತೋರಿಸುತ್ತಾರೆ. ಫೈಲ್ವಾನರು ಎದುರಾಳಿಯ ಬೆನ್ನು ನೆಲಕ್ಕೆ ಮುಟ್ಟಿಸುತ್ತಿದ್ದಂತೆ ಪ್ರೇಕ್ಷಕರು ಕೇಕೆ, ಶಿಳ್ಳೆ ಹಾಕಿ ಹುರಿದುಂಬಿಸುತ್ತಾರೆ.
ಈ ಕುರಿತು ಆಡಳಿತ ಮಂಡಳಿ ಸದಸ್ಯ ಉಮೇಶ ಅಂಗಡಿ ಮಾತನಾಡಿ, ''ಮುನವಳ್ಳಿ ಗ್ರಾಮದಲ್ಲಿ ಒಂದು ಮಾವಿನ ತೋಪು ಇತ್ತು. ಇಲ್ಲಿ ದುರ್ಗಾದೇವಿ ಬಂದು ನೆಲೆಸಿದ್ದಳು ಎಂಬುದು ನಮ್ಮ ಹಿರಿಯರ ಮಾತು. ಬಂಕಾಪುರದ ಚಾವಿ ದುರ್ಗಪ್ಪ ಎಂಬವರ ತಂದೆಯ ಕನಸಿನಲ್ಲಿ ದೇವಿ ಬಂದು, ನನಗೊಂದು ದೇವಸ್ಥಾನ ಕಟ್ಟುವಂತೆ ಹೇಳಿದ್ದಾರೆ. ಹಾಗಾಗಿ, ಅವರು ಇಲ್ಲಿ ಬಂದು ದೇವಸ್ಥಾನ ಕಟ್ಟಿಸಿದ್ದಾರೆ. ನಂತರ ಸುತ್ತಮುತ್ತಲಿನ ಹಿರಿಯರು ಸೇರಿಕೊಂಡು ಜಾತ್ರೆ ಮಾಡಿಕೊಂಡು ಬಂದಿದ್ದಾರೆ. ಇದೀಗ 100ರಿಂದ 150 ಹಳ್ಳಿಯ ಜನರು ಸೇರಿಕೊಂಡು ಯಾವುದೇ ಪ್ರಾಣಿಯ ಹಿಂಸೆ ಇಲ್ಲದೆ ಜಾತ್ರೆ ನಡೆಸಿಕೊಂಡು ಬರುತ್ತಿದ್ದೇವೆ'' ಎಂದರು.
''ಆರರಿಂದ ಎಂಟು ದಿನ ನಡೆಯುವ ಜಾತ್ರೆಯಲ್ಲಿ ಮೂರು ದಿನ ರಾಜ್ಯಮಟ್ಟದ ಜಂಗಿ ಕುಸ್ತಿ ನಡೆಯುತ್ತದೆ. 2ರಿಂದ 3 ದಿನ ಉಡಿ ತುಂಬುವ ಕಾರ್ಯಕ್ರಮವಿರುತ್ತದೆ. ಕುಸ್ತಿಪಟುಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಸೇರಿದಂತೆ ಊಟದ ವ್ಯವಸ್ಥೆ ಮಾಡುತ್ತೇವೆ. ಒಳ್ಳೆಯ ಇನಾಮು ಕೊಡುತ್ತೇವೆ'' ಎಂದು ಹೇಳಿದರು.
ಗ್ರಾಮಸ್ಥರಾದ ಗದಿಗೆಯ್ಯ ಹಿರೇಮಠ ಮಾತನಾಡಿ, ''ಶ್ರೀ ದುರ್ಗಾದೇವಿ ಕುಸ್ತಿ ಪ್ರತಿವರ್ಷ ಅದ್ದೂರಿಯಾಗಿ ನಡೆದುಕೊಂಡು ಬರಲಾಗುತ್ತಿದೆ. ಇಲ್ಲಿಗೆ ವಿವಿಧೆಡೆಯಿಂದ ಪೈಲ್ವಾನರು ಬರುತ್ತಾರೆ. ಗರಡಿಮನೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲು ಕಮಿಟಿಯವರು ನಿರ್ಣಯಿಸಿದ್ದಾರೆ'' ಎಂದು ತಿಳಿಸಿದರು.
ಇದನ್ನೂ ಓದಿ: ಬಾಗಲಕೋಟೆ: ಅದ್ಧೂರಿಯಾಗಿ ಜರುಗಿದ ಬಾದಾಮಿ ಬನಶಂಕರಿ ಜಾತ್ರೆ - BADAMI BANASHANKARI FAIR