ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೋಮವಾರ 44 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ, ಕೂಡಲೇ ಹಿಂಪಡೆದಿದೆ.
ಪಟ್ಟಿಯನ್ನು ಮರುಪರಿಶೀಲಿಸಲಾಗುತ್ತಿದೆ ಮತ್ತು ಪಕ್ಷವು ಶೀಘ್ರದಲ್ಲೇ 'ಪುನರ್ ರಚಿಸಿದ' ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಚುನಾವಣೆಗಳು ನಡೆಯುತ್ತಿವೆ. ಆದರೆ, ಈ ಚುನಾವಣೆಗೆ ಬಿಜೆಪಿಯು ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಲವಾರು ಖ್ಯಾತನಾಮರ ಹೆಸರುಗಳು ಕಾಣಿಸದಿರುವುದು ಆಶ್ಚರ್ಯ ಮೂಡಿಸಿದೆ.
ಈಗ ಹಿಂಪಡೆಯಲಾದ ಪಟ್ಟಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದ್ರ ರೈನಾ, ಮಾಜಿ ಉಪಮುಖ್ಯಮಂತ್ರಿಗಳಾದ ಕವಿಂದರ್ ಗುಪ್ತಾ ಮತ್ತು ನಿರ್ಮಲ್ ಸಿಂಗ್ ಅವರ ಹೆಸರು ಇರಲಿಲ್ಲ. ಪಟ್ಟಿಯಲ್ಲಿ ಮೊದಲ ಹಂತಕ್ಕೆ 15, ಎರಡನೇ ಹಂತಕ್ಕೆ 10 ಮತ್ತು ಮೂರನೇ ಮತ್ತು ಅಂತಿಮ ಹಂತದ ಚುನಾವಣೆಗೆ 19 ಸೇರಿದಂತೆ ಒಟ್ಟು 44 ಅಭ್ಯರ್ಥಿಗಳನ್ನು ಹೆಸರಿಸಲಾಗಿತ್ತು.
ಡಿಲಿಮಿಟೇಶನ್ ಪ್ರಕ್ರಿಯೆಯ ನಂತರ ಅನೇಕ ವಿಧಾನಸಭಾ ಸ್ಥಾನಗಳನ್ನು ಮರು ವಿಂಗಡಣೆ ಮಾಡಲಾಗಿದೆ ಮತ್ತು ಅದೇ ಕಾರಣದಿಂದ ಆಯಾ ಕ್ಷೇತ್ರಗಳ ಬದಲಾದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ಹೇಳಿವೆ.