ಶ್ರೀನಗರ (ಜಮ್ಮು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಬಸೋಲಿ ವಿಧಾನ ಸಭಾ ಕ್ಷೇತ್ರ ಚುನಾವಣಾ ರಾಜಕೀಯದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಕಥುವಾ ಜಿಲ್ಲೆಯಲ್ಲಿರುವ ಈ ಕ್ಷೇತ್ರವು ಶ್ರೀಮಂತ ಚುನಾವಣಾ ಇತಿಹಾಸ ಹೊಂದಿದೆ. ವಿಶೇಷವಾಗಿ ಚೌಧರಿ ಲಾಲ್ ಸಿಂಗ್ 2014ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷವನ್ನು ಪ್ರತಿನಿಧಿಸಿದ್ದರು.
ಚೌಧರಿ ಲಾಲ್ ಸಿಂಗ್, ಅನುಭವಿ ರಾಜಕಾರಣಿ, ಬಸೋಲಿ ಮತದಾರರಿಗೆ ಹೊಸ ವ್ಯಕ್ತಿಯೇನಲ್ಲ. ಬಿಜೆಪಿಯಿಂದ ಪ್ರತಿನಿಧಿಸುವ ಮೊದಲು, ಈ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದರು. 1996 ರಲ್ಲಿ ಅಖಿಲ ಭಾರತ ಇಂದಿರಾ ಕಾಂಗ್ರೆಸ್ (ತಿವಾರಿ) ನಿಂದ ಮತ್ತು 2002ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದರು. ಈಗ ಪಕ್ಷ ಬದಲಿಸಿರುವ ಅವರು ಮತ್ತೆ ಕಾಂಗ್ರೆಸ್ನಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅವರ ರಾಜಕೀಯ ಪ್ರಯಾಣ ಏರಿಳಿತಗಳನ್ನು ಕಂಡಿದೆ, ಲೋಕಸಭೆ ಚುನಾವಣೆಯಲ್ಲಿ ಉಧಮ್‌ಪುರ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಇತ್ತೀಚಿನ ಪ್ರಯತ್ನವೂ ಸೇರಿದಂತೆ, ಅದು ಅವರಿಗೆ ಯಶಸ್ಸನ್ನು ನೀಡಲಿಲ್ಲ.
2024ರ ವಿಧಾನಸಭಾ ಚುನಾವಣೆಯ ಮೂರನೇ ಹಂತದ ಮತದಾನ ಸಮೀಪಿಸುತ್ತಿರುವ ಹೊತ್ತಲ್ಲಿ, ಬಸೋಲಿ ಕ್ಷೇತ್ರಕ್ಕೆ ಚೌಧರಿ ಲಾಲ್ ಸಿಂಗ್ ಅವರು ಮತ್ತೆ ಮರಳಿರುವುದು, ಮತದಾರರಿಗೆ ನಿರ್ಣಾಯಕ ಘಟ್ಟವನ್ನು ಪ್ರತಿನಿಧಿಸುತ್ತದೆ. ಈ ಹಿಂದೆ 2004 ಮತ್ತು 2009 ರಲ್ಲಿ ಕಾಂಗ್ರೆಸ್ ಜನಾದೇಶದ ಅಡಿಯಲ್ಲಿ ಉಧಮ್‌ಪುರದ ಸಂಸದರಾಗಿ ಸೇವೆ ಸಲ್ಲಿಸಿದ ಸಿಂಗ್ ಅವರಿಗೆ ಅನುಭವ ಜೊತೆಗೆ ಗೆಲುವಿನ ಇತಿಹಾಸವಿದೆ. ಸ್ಥಾನವನ್ನು ಮರಳಿ ಪಡೆಯುವ ಅವರ ಗುರಿಯು ಈ ಚುನಾವಣಾ ಸ್ಪರ್ಧೆಯ ಸುತ್ತ ಬೆಳೆಯುತ್ತಿರುವ ನಿರೀಕ್ಷೆಯನ್ನು ಹೆಚ್ಚಿಸುತ್ತದೆ.
ಮತ್ತೊಂದೆಡೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಚುನಾವಣಾ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿಯುತ್ತಿರುವ ಉದ್ಯಮಿ ದರ್ಶನ್ ಸಿಂಗ್ ಅವರನ್ನು ನಾಮ ನಿರ್ದೇಶನ ಮಾಡಿದೆ. ಲಾಲ್ ಸಿಂಗ್ ಮತ್ತು ದರ್ಶನ್ ಸಿಂಗ್ ಇಬ್ಬರೂ ಒಂದೇ ರಜಪೂತ ಸಮುದಾಯದಿಂದ ಬಂದವರು. ಇದು ಸ್ಪರ್ಧೆಯ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಈ ಚುನಾವಣೆಯಲ್ಲಿ ಇದು ಮತದಾರರ ಗ್ರಹಿಕೆಗಳು ಮತ್ತು ಜನಾಂಗದ ಒಟ್ಟಾರೆ ಡೈನಾಮಿಕ್ಸ್‌ನ ಮೇಲೆ ಪ್ರಭಾವ ಬೀರಬಹುದು.
ಕ್ಷೇತ್ರದಿಂದ ನಾಲ್ಕು ಸ್ಪರ್ಧಿಗಳು ಕಣಕ್ಕೆ:ಏಳು ಅಭ್ಯರ್ಥಿಗಳು ಆರಂಭದಲ್ಲಿ ಅಖಾಡಕ್ಕೆ ಇಳಿದಿದ್ದು, ಎರಡು ನಾಮಪತ್ರಗಳು ತಿರಸ್ಕಾರವಾಗುವ ಸಾಧ್ಯತೆಯಿದೆ. ಸ್ವತಂತ್ರ ಅಭ್ಯರ್ಥಿ ಮೊಹಮ್ಮದ್ ರಫೀಕ್ ಬಟ್ ತಮ್ಮ ನಾಮಪತ್ರವನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ. ಹಾಗಾಗಿ ಈಗ ಒಟ್ಟು ನಾಲ್ಕು ಅಭ್ಯರ್ಥಿಗಳ ಮಧ್ಯೆ ಸ್ಪರ್ಧೆ ಗಟ್ಟಿಯಾಗಿದೆ. ಅದರಲ್ಲೂ ಹಿರಿಯ ಕಾಂಗ್ರೆಸ್ ನಾಯಕ ಚೌಧರಿ ಲಾಲ್ ಸಿಂಗ್ ಮತ್ತು ಬಿಜೆಪಿಯ ದರ್ಶನ್ ಕುಮಾರ್ ನಡುವಿನ ಸ್ಪರ್ಧೆಯ ಮೇಲೆ ಎಲ್ಲರ ಗಮನ ನೆಟ್ಟಿದೆ.