ಕರ್ನಾಟಕ

karnataka

ETV Bharat / bharat

ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ: ಮಧ್ಯಾಹ್ನ 1 ಗಂಟೆಗೆ ಶೇ 36.93 ಮತದಾನ - Jammu Kashmir Assembly Election

Jammu Kashmir Assembly Election: ಜಮ್ಮು ಕಾಶ್ಮೀರದ 6 ಜಿಲ್ಲೆಗಳ 26 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಸೇರಿದಂತೆ ಹಲವು ಪ್ರಮುಖರು ಕಣದಲ್ಲಿದ್ದಾರೆ. ಒಟ್ಟು 25.78 ಲಕ್ಷ ಮತದಾರರು 239 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ 36.93ರಷ್ಟು ಮತದಾನ ದಾಖಲಾಗಿದೆ.

JAMMU AND KASHMIR POLITICAL PARTIES  JAMMU AND KASHMIR ELECTION RULES  JK ELECTION CANDIDATE LIST  JAMMU KASHMIR ELECTIONS
ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ (ETV Bharat)

By ETV Bharat Karnataka Team

Published : Sep 25, 2024, 7:39 AM IST

Updated : Sep 25, 2024, 1:57 PM IST

ಶ್ರೀನಗರ:ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ಪೀರ್ ಪಂಜಾಲ್ ಪರ್ವತ ಶ್ರೇಣಿಯ ಎರಡೂ ಬದಿಯಲ್ಲಿರುವ ಶ್ರೀನಗರ, ಬುದ್ಗಾಮ್, ರಾಜೌರಿ, ಪೂಂಚ್, ಗಂದರ್ಬಾಲ್ ಮತ್ತು ರಿಯಾಸಿ ಜಿಲ್ಲೆಗಳ 26 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ನಾಯಕ ಒಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಸೇರಿದಂತೆ ಹಲವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಒಮರ್ ಅಬ್ದುಲ್ಲಾ ಗಂದರ್‌ಬಾಲ್ ಮತ್ತು ಬುದ್ಗಾಮ್ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ಸೆಂಟ್ರಲ್ ಶಾಲ್ತೆಂಗ್ ಕ್ಷೇತ್ರದಲ್ಲಿ ಹಮೀದ್ ಕರ್ರಾ ಮತ್ತು ನೌಶೆರಾದಲ್ಲಿ ರವೀಂದರ್ ರೈನಾ ಸ್ಪರ್ಧಿಸುತ್ತಿದ್ದಾರೆ. ಈ ಹಂತದಲ್ಲಿ 25.78 ಲಕ್ಷ ಮತದಾರರು 239 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಒಟ್ಟು 3,502 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಇವುಗಳಲ್ಲಿ 1,056 ಮತಗಟ್ಟೆಗಳು ನಗರ ಪ್ರದೇಶದಲ್ಲಿ ಮತ್ತು 2,446 ಮತಗಟ್ಟೆಗಳು ಗ್ರಾಮೀಣ ಪ್ರದೇಶದಲ್ಲಿವೆ. ಪಾರದರ್ಶಕ ಚುನಾವಣೆಗಾಗಿ ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

ಪ್ರತ್ಯೇಕತಾವಾದಿ ನಾಯಕನಿಂದ ಜೈಲಿನಿಂದಲೇ ಸ್ಪರ್ಧೆ:ಈ ಬಾರಿ ಬೀರವಾ ಮತ್ತು ಗಂದರ್‌ಬಲ್‌ ವಿಶೇಷ ಆಸಕ್ತಿಯ ಕ್ಷೇತ್ರಗಳಾಗಿವೆ. ಜೈಲಿನಲ್ಲಿರುವ ಪ್ರತ್ಯೇಕತಾವಾದಿ ನಾಯಕ ಸರ್ಜನ್ ಅಹ್ಮದ್ ವೇಜ್ ಅಲಿಯಾಸ್ ಬರ್ಕತಿ ಈ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವುದು ಇದಕ್ಕೆ ಕಾರಣ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಾರಾಮುಲ್ಲಾ ಕ್ಷೇತ್ರದಲ್ಲಿ ಒಮರ್ ಅಬ್ದುಲ್ಲಾ ಅವರನ್ನು 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಇಂಜಿನಿಯರ್ ರಶೀದ್ ಸೋಲಿಸಿದ್ದರು. ಹೀಗಾಗಿ ಬರ್ಕತಿ, ರಶೀದ್ ಸಾಧನೆಯನ್ನು ಪುನರಾವರ್ತಿಸಲು ಬಯಸಿದಂತಿದೆ. ಇಂಜಿನಿಯರ್ ರಶೀದ್ ತಿಹಾರ್ ಜೈಲಿನಿಂದಲೇ ಸ್ಪರ್ಧಿಸಿ ಬಾರಾಮುಲ್ಲಾದಲ್ಲಿ ಗೆದ್ದಿದ್ದರು.

ಶ್ರೀನಗರ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 93 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬುದ್ಗಾಮ್ ಜಿಲ್ಲೆಯ ಐದು ಸ್ಥಾನಗಳಲ್ಲಿ 46 ಅಭ್ಯರ್ಥಿಗಳು ಮತ್ತು ರಾಜೌರಿ ಜಿಲ್ಲೆಯ ಐದು ಸ್ಥಾನಗಳಲ್ಲಿ 34 ಅಭ್ಯರ್ಥಿಗಳಿದ್ದಾರೆ. ಪೂಂಚ್ ಜಿಲ್ಲೆಯ ಮೂರು ಸ್ಥಾನಗಳಿಗೆ 25 ಅಭ್ಯರ್ಥಿಗಳು, ಗಂದರ್ಬಾಲ್ ಜಿಲ್ಲೆಯ ಎರಡು ಸ್ಥಾನಗಳಿಗೆ 21 ಅಭ್ಯರ್ಥಿಗಳು ಮತ್ತು ರಿಯಾಸಿ ಜಿಲ್ಲೆಯ ಮೂರು ಸ್ಥಾನಗಳಿಗೆ 20 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಎರಡನೇ ಹಂತದ ಮತದಾನದ ಹಿನ್ನೆಲೆಯಲ್ಲಿ ರಾಜೌರಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರತಿ ವಾಹನವನ್ನು ಕೂಲಂಕಷವಾಗಿ ತಪಾಸಣೆ ಮಾಡಲಾಗುತ್ತದೆ. ಚುನಾವಣೆ ನಡೆಯುವ 6 ಜಿಲ್ಲೆಗಳ ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ.

ಸೆಪ್ಟಂಬರ್ 18ರಂದು ಜಮ್ಮು ಮತ್ತು ಕಾಶ್ಮೀರದ 24 ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಮತದಾನದಲ್ಲಿ ಶೇ.61.38ರಷ್ಟು ಮತದಾನವಾಗಿತ್ತು. ಉಳಿದ 40 ವಿಧಾನಸಭಾ ಸ್ಥಾನಗಳಿಗೆ ಅಕ್ಟೋಬರ್ 1ರಂದು ಕೊನೆಯ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್ 8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

ಇದನ್ನೂ ಓದಿ:ಜಮ್ಮು- ಕಾಶ್ಮೀರ ಚುನಾವಣೆ: ಅರ್ಧದಷ್ಟು ಅಭ್ಯರ್ಥಿಗಳು ಕೋಟ್ಯಧಿಪತಿಗಳು, ಹಲವರ ಮೇಲಿದೆ ಕ್ರಿಮಿನಲ್​​ ಕೇಸ್​ - ADR reoprt on J K Assembly Polls

Last Updated : Sep 25, 2024, 1:57 PM IST

ABOUT THE AUTHOR

...view details