ಶ್ರೀನಗರ (ಜಮ್ಮು-ಕಾಶ್ಮೀರ):ಉಗ್ರರು ಅಡಗಿರುವ ರಹಸ್ಯ ಸ್ಥಳಗಳನ್ನು ಹುಡುಕಿ ಹತ್ಯೆ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಡುಗಿದ ಬೆನ್ನಲ್ಲೇ, ಜಮ್ಮು- ಕಾಶ್ಮೀರದಲ್ಲಿ ಕಾರ್ಮಿಕನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಅನಂತನಾಗ್ ಜಿಲ್ಲೆಯ ಬಿಜ್‌ಬೆಹರಾ ಪ್ರದೇಶದ ಜಬ್ಲಿಪೋರಾದಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಬಿಹಾರ ಮೂಲದ ಕಾರ್ಮಿಕ ರಾಜಾ ಷಾ ಮೃತಪಟ್ಟ ಕಾರ್ಮಿಕ.
ಕಳವಳಕಾರಿ ಸಂಗತಿಯೆಂದರೆ, 10 ದಿನಗಳ ಅಂತರದಲ್ಲಿ ನಡೆದ ಎರಡನೇ ಕಾರ್ಮಿಕನ ಹತ್ಯೆಯಾಗಿದೆ. ಏಪ್ರಿಲ್ 8 ರಂದು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸ್ಥಳೀಯರಲ್ಲದ ಚಾಲಕನನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದರು. ಇದು ಕಾಶ್ಮೀರದಲ್ಲಿನ ವಲಸಿಗರನ್ನು ಆತಂಕಕ್ಕೀಡು ಮಾಡಿದೆ.
ಉನ್ನತ ಪೊಲೀಸ್ ಅಧಿಕಾರಿಗಳ ಪ್ರಕಾರ, ಬಿಹಾರಿ ಕಾರ್ಮಿಕ ರಾಜಾ ಇಲ್ಲಿ ವಸ್ತುಗಳ ಮಾರಾಟ ಕೆಲಸ ಮಾಡಿಕೊಂಡಿದ್ದ. ಉಗ್ರರು ಈತನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ತೀರಾ ಹತ್ತಿರದಿಂದ (ಪಾಯಿಂಟ್ ಬ್ಲಾಕ್ ರೇಂಜ್) ಬುಲೆಟ್ ಹಾರಿಸಲಾಗಿದೆ. ಇದರಿಂದ ಕಾರ್ಮಿಕನ ಹೊಟ್ಟೆ ಮತ್ತು ಕುತ್ತಿಗೆಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮೃತಪಟ್ಟಿದ್ದಾರೆ. ಘಟನೆಯ ನಂತರ, ದಾಳಿಕೋರರ ಪತ್ತೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿವೆ.