ಶ್ರೀನಗರ (ಜಮ್ಮು - ಕಾಶ್ಮೀರ):ದಶಕದ ಬಳಿಕ ಜಮ್ಮು- ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆದಿದ್ದು, ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಯಾವ ಪಕ್ಷ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಗರಿಗೆದರಿದೆ. ನ್ಯಾಷನಲ್ ಕಾನ್ಫ್ರೆನ್ಸ್ (ಎನ್‌ಸಿ) ಮತ್ತು ಕಾಂಗ್ರೆಸ್ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿವೆ. ಪಿಡಿಪಿ, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದವು.
ಈ ಮಧ್ಯೆ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗದೇ ಇದ್ದಲ್ಲಿ ಯಾವ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲಿವೆ ಎಂಬ ಚರ್ಚೆಯೂ ಶುರುವಾಗಿದೆ. ನ್ಯಾಷನಲ್ ಕಾನ್ಫ್ರೆನ್ಸ್ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ ಅವರು ಈ ಬಗ್ಗೆ ಮಾತನಾಡಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆಗಾಗಿ ತಮ್ಮ ಪಕ್ಷವು ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಶನಿವಾರ ಘೋಷಿಸಿದ್ದಾರೆ.
ನಮ್ಮ ಪಕ್ಷ ಬಿಜೆಪಿಯ ಜೊತೆಗೆ ಗುರುತಿಸಿಕೊಳ್ಳುವುದಿಲ್ಲ. ಚುನಾವಣೆಯಲ್ಲಿ ಪಡೆದಿರುವ ಮತಗಳು ಬಿಜೆಪಿ ವಿರುದ್ಧವಾಗಿವೆ. ಇಲ್ಲಿನ ಮುಸ್ಲಿಮರಿಗೆ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದರು. ಅಂಗಡಿಗಳು, ಮನೆಗಳು, ಮಸೀದಿಗಳು ಮತ್ತು ಶಾಲೆಗಳನ್ನು ಬುಲ್ಡೋಜರ್‌ನಿಂದ ಬಿಜೆಪಿ ಒಡೆದು ಹಾಕಿದೆ. ಅಂತಹ ಪಕ್ಷದ ಜೊತೆಗೆ ನಾವು ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಸತ್ ಚುನಾವಣೆಯಲ್ಲಿ ಒಬ್ಬ ಮುಸ್ಲಿಂ ನಾಯಕನಿಗೆ ಸ್ಪರ್ಧೆಗೆ ಅವಕಾಶ ನೀಡಿಲ್ಲ. ಕೇಂದ್ರ ಸಚಿವ ಸಂಪುಟದಲ್ಲಿ ಒಬ್ಬ ಮುಸ್ಲಿಂ ಮಂತ್ರಿಯೂ ಇಲ್ಲ. ಚುನಾವಣೆಯಲ್ಲಿ ಜನರು ಬಿಜೆಪಿಗೆ ಮತ ಹಾಕಿರುವುದಿಲ್ಲ. ಬಿಜೆಪಿ ಸರ್ಕಾರ ರಚನೆ ಮಾಡುವ ಆಸೆ ಹೊಂದಿದ್ದರೆ ಅದು ಹಗಲುಕನಸು ಎಂದು ಹೇಳಿದ್ದಾರೆ.