ಆಗ್ರಾ:ಉತ್ತರ ಪ್ರದೇಶದಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ದೇಶಾದ್ಯಂತ ಭಾರಿ ಸಂಚಲನವನ್ನೇ ಸೃಷ್ಟಿಸಿದೆ. ಶೋಧದ ವೇಳೆ ಸಿಕ್ಕ ನೋಟುಗಳ ಕಟ್ಟುಗಳನ್ನು ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಮೂವರು ಚಪ್ಪಲಿ- ಶೂ ವ್ಯಾಪಾರಿಗಳ ಮನೆಗಳಲ್ಲಿ ಎಲ್ಲೆಂದರಲ್ಲಿ ಕಂತೆ ಕಂತೆ ನೋಟುಗಳು ಕಂಡು ಬಂದಿವೆ. ಹಣ ಎಣಿಸಲು ಸಾಧ್ಯವಾಗದ ಕಾರಣ ಭಾರಿ ಪ್ರಮಾಣದಲ್ಲಿ ಎಣಿಕೆ ಯಂತ್ರಗಳನ್ನು ತರಿಸಬೇಕಾದ ಪರಿಸ್ಥಿತಿಯು ಐಟಿ ಅಧಿಕಾರಿಗಳಿಗೆ ಎದುರಾಗಿತ್ತು ಎಂದು ವರದಿಯಾಗಿದೆ. ರಾಶಿ ರಾಶಿ ಹಣದ ಕಟ್ಟುಗಳ ಜತೆಗೆ ಈ ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೇವಲ 42 ಗಂಟೆಗಳಲ್ಲಿ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಚಿನ್ನಾಭರಣ, ಆಸ್ತಿ ಐಟಿ ವಶಕ್ಕೆ ಪಡೆದಿದೆ.
ಆಗ್ರಾ ಶೂ ವ್ಯಾಪಾರಿಗಳ ನಿವಾಸಗಳ ಮೇಲೆ ಐಟಿ ದಾಳಿ - ನೂರು ಕೋಟಿ ವಶ: ಆಗ್ರಾದ ಮೂವರು ಶೂ ವ್ಯಾಪಾರಿಗಳಿಗೆ ಸೇರಿದ 14 ನಿವೇಶನಗಳಲ್ಲಿ ಆದಾಯ ತೆರಿಗೆ ಇಲಾಖೆ ಸತತ 42 ಗಂಟೆಗೂ ಹೆಚ್ಚು ಕಾಲ ಶೋಧ ನಡೆಸಿದೆ. ಸುಮಾರು 42 ಗಂಟೆಗಳ ಕಾಲ ನಡೆದ ಈ ಶೋಧದಲ್ಲಿ ಅಧಿಕಾರಿಗಳಿಗೆ ಕೋಟಿ ಕೋಟಿ ಹಣ ಸಿಕ್ಕಿದೆ. ಶೂ ವ್ಯಾಪಾರಿಗಳ ಮನೆಗಳಲ್ಲಿನ ಹಾಸಿಗೆ, ಕಪಾಟು, ಬ್ಯಾಗ್, ಶೂ ಬಾಕ್ಸ್ ಗಳಲ್ಲಿ ಕೋಟ್ಯಂತರ ರೂ.500 ನೋಟುಗಳ ಬಂಡಲ್ ಗಳು ಪತ್ತೆಯಾಗಿವೆ.
ಹಣದ ಜತೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣಗಳನ್ನೂ ಇದೇ ವೇಳೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಅಕ್ರಮ ಆಸ್ತಿಯ ಒಟ್ಟಾರೆ ಮೊತ್ತ ಇದುವರೆಗೆ 100 ಕೋಟಿ ರೂ.ಗಳಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ. ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ. ಆದರೆ ಇದುವರೆಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಷ್ಟು ಪ್ರಮಾಣದ ನಗದು, ಚಿನ್ನಾಭರಣ, ಆಸ್ತಿ ವಶಕ್ಕೆ ಪಡೆಯಲಾಗಿದೆ ಎಂಬ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ.
14 ಸ್ಥಳಗಳನ್ನು ಏಕಕಾಲದಲ್ಲಿ ಹುಡುಕಾಟ: ಆದಾಯ ತೆರಿಗೆ ತನಿಖಾ ತಂಡ ಶನಿವಾರ ಬೆಳಗ್ಗೆ 11 ಗಂಟೆಗೆ ಆಗ್ರಾದ 14 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಿತು. ಐಟಿ ಇಲಾಖೆಯು ಎಂಜಿ ರಸ್ತೆಯ ಬಿಕೆ ಶೂಸ್, ಧಕ್ರಾನ್‌ನ ಮನ್ಶು ಫುಟ್‌ವೇರ್ ಮತ್ತು ಇಂಗು ಮಂಡಿಯ ಹರ್ಮಿಲಾಪ್ ಟ್ರೇಡರ್ಸ್ ಕಚೇರಿಗಳು ಮತ್ತು ಮನೆಗಳಲ್ಲಿ ತಪಾಸಣೆ ಕೈಗೊಂಡಿತ್ತು. ಆಗ್ರಾ, ಲಕ್ನೋ, ಕಾನ್ಪುರ, ನೋಯ್ಡಾದ ಅಧಿಕಾರಿಗಳು, ಉದ್ಯೋಗಿಗಳು, ಬ್ಯಾಂಕ್ ಉದ್ಯೋಗಿಗಳು ಮತ್ತು ಪೊಲೀಸರು ಈ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು.