ಪೋರಬಂದರ್:ಗುಜರಾತಿನ ಕರಾವಳಿಯು ಮಾದಕವಸ್ತು ಕಳ್ಳಸಾಗಣೆ ಕೇಂದ್ರವಾಗಿ ಮಾರ್ಪಟ್ಟಿದೆ. ಇದರ ಹಿನ್ನೆಲೆ ಗುಜರಾತ್ ಎಟಿಎಸ್ ಮತ್ತು ಭಾರತೀಯ ನೌಕಾಪಡೆ, ಎನ್‌ಸಿಬಿಯಿಂದ ನಡೆದ ಕಾರ್ಯಾಚರಣೆ ವೇಳೆ, ಸಮುದ್ರ ಗಡಿಯಲ್ಲಿ ಚರಸ್ ಸೇರಿದಂತೆ ಅಪಾರ ಪ್ರಮಾಣದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರ ಮೌಲ್ಯ 1 ಸಾವಿರ ಕೋಟಿ ರೂ.ಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
1 ಸಾವಿರ ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶಕ್ಕೆ: ನಿರ್ದಿಷ್ಟ ಮಾಹಿತಿ ಆಧರಿಸಿ ಗುಜರಾತ್ ಎಟಿಎಸ್, ಭಾರತೀಯ ನೌಕಾಪಡೆ ಮತ್ತು ಎನ್ಸಿಬಿ ಜಂಟಿಯಾಗಿ ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದವು. ನಾಲ್ವರು ಇರಾನ್ ಸಿಬ್ಬಂದಿಯಿದ್ದ ದೋಣಿಯನ್ನು ತಡೆದು ನಿಲ್ಲಿಸಲಾಯಿತು. 1,000 ಕೋಟಿ ಮೌಲ್ಯದ ಅಂದಾಜು 2,000 ರಿಂದ 3,000 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಪತ್ರಿಕಾಗೋಷ್ಠಿ ನಡೆಸಿ ಅಧಿಕೃತ ವಿವರಗಳನ್ನು ನೀಡಿದೆ. ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆಯ ಸಂದರ್ಭದಲ್ಲಿ, ದೋಣಿಯಿಂದ ಅಪಾರ ಪ್ರಮಾಣದ ಚರಸ್ (ಹಶಿಶ್) ಸೇರಿದಂತೆ ವಿವಿಧ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುಜರಾತ್ ಎಟಿಎಸ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.