ನವದೆಹಲಿ:ಡಿಎನ್ಎ ಪರೀಕ್ಷೆಯು ಯಾವುದೇ ವ್ಯಕ್ತಿಯ ಘನತೆ ಮತ್ತು ಗೌಪ್ಯತೆಗೆ ಧಕ್ಕೆ ತರಬಾರದು. ಇದರಿಂದ ಆತನ ಸಾಮಾಜಿಕ ಗೌರವಕ್ಕೂ ಚ್ಯುತಿ ತಂದಂತಾಗುತ್ತದೆ ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ.
ತನ್ನ ತಾಯಿಯ ವಿವಾಹೇತರ ಸಂಬಂಧದಿಂದ ಜನಿಸಿದ್ದೇನೆ. ನನ್ನ ಜೈವಿಕ ತಂದೆ ಯಾರು ಎಂದು ತಿಳಿದುಕೊಳ್ಳಲು ವ್ಯಕ್ತಿಯೊಬ್ಬರ ಡಿಎನ್ಎ ಪರೀಕ್ಷೆ ನಡೆಸಬೇಕು ಎಂದು ಕೋರಿ 23 ವರ್ಷದ ಯುವಕನೊಬ್ಬ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.
ಒಬ್ಬ ವ್ಯಕ್ತಿ ತನ್ನ ತಂದೆಯೇ ಎಂದು ತಿಳಿದುಕೊಳ್ಳುವ ಕಾನೂನುಬದ್ಧ ಆಸಕ್ತಿಯು ಇನ್ನೊಬ್ಬರ ಗೌಪ್ಯತೆ ಮತ್ತು ಘನತೆಯ ಹಕ್ಕನ್ನು ಮೀರಬಾರದು. ಇಂತಹ ಪ್ರಕರಣದಲ್ಲಿ ಡಿಎನ್ಎ ನಡೆಸಲು ಕೋರುವುದು ವ್ಯಕ್ತಿಯ ಹಕ್ಕಿನ ಚ್ಯುತಿಯಾಗಲಿದೆ. ಯುವಕನ ಮಾಜಿ ತಂದೆಯೇ ನಿಜವಾದ ಜೈವಿಕ ತಂದೆ ಎಂದು ತೀರ್ಪು ನೀಡಿ, ಎರಡು ದಶಕಗಳಿಂದ ನಡೆಯುತ್ತಿದ್ದ ಕಾನೂನು ಸಮರಕ್ಕೆ ಕೋರ್ಟ್ ಇತಿಶ್ರೀ ಹಾಡಿತು.
ಏನಿದು ಪ್ರಕರಣ:ಕೇರಳದ ಯುವಕನೊಬ್ಬ, ತನ್ನ ತಾಯಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ತನ್ನ ತಂದೆಯೇ ಎಂದು ತಿಳಿದುಕೊಳ್ಳಲು ಡಿಎನ್ಎ ಪರೀಕ್ಷೆ ನಡೆಸಬೇಕು ಎಂದು ಕೋರಿದ್ದ. ಆದರೆ, ಹೈಕೋರ್ಟ್ ಇದನ್ನು ನಿರಾಕರಿಸಿತ್ತು. ಇದರ ವಿರುದ್ಧ ಯುವಕ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ. ಇತ್ತ ಪ್ರತಿವಾದಿಯಾದ ವ್ಯಕ್ತಿಯೂ ತಾನು ಯುವಕನ ತಂದೆ ಅಲ್ಲ ಎಂದು ನಿರಾಕರಿಸುತ್ತಲೇ ಬಂದಿದ್ದರು. ಆರೋಪದಿಂದ ನನ್ನ ಸಾಮಾಜಿಕ ಗೌರವಕ್ಕೆ ಧಕ್ಕೆ ತಂದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.