ಕಚ್ (ಗುಜರಾತ್):500 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಯುವತಿ ಇಂದ್ರ ಮೀನಾ ಸಾವನ್ನಪ್ಪಿದ್ದು, 34 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಆಕೆಯ ಮೃತದೇಹವನ್ನು ಕೊಳವೆಬಾವಿಯಿಂದ ಮೇಲೆತ್ತಲಾಗಿದೆ.
ಇಲ್ಲಿನ ಭುಜ್ ತಾಲೂಕಿನ ಕಂಧೇರ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ 5 ಗಂಟೆ ಸುಮಾರಿಗೆ 22 ವರ್ಷದ ಯುವತಿ ಇಂದ್ರ ಮೀನಾ ಬೋರ್ವೆಲ್ಗೆ ಬಿದ್ದಿದ್ದಳು. ಆಕೆಯ ರಕ್ಷಣೆಗೆ ಭುಜ್ ಅಗ್ನಿ ಶಾಮಕದಳ ಮತ್ತು 108 ತುರ್ತು ಸೇವಾ ಸಿಬ್ಬಂದಿಗಳು ಆಕೆಯನ್ನು ರಕ್ಷಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದರು. ಯುವತಿಯ ಸ್ಥಿತಿಯನ್ನು ತಿಳಿಯಲು ಕ್ಯಾಮೆರಾವನ್ನು ಕೂಡ ಕೊಳವೆಬಾವಿಯಲ್ಲಿ ಬಿಡಲಾಗಿತ್ತು. ಅಲ್ಲದೇ, ಆಕೆಗೆ ಉಸಿರಾಟಕ್ಕೆ ತೊಂದರೆಯಾಗದಿರಲಿ ಎಂದು ಆಮ್ಲಜನಕ ಪೂರೈಕೆಯನ್ನು ಸಹ ಮಾಡಲಾಗಿತ್ತು. ಆದರೆ, ಈ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ.
ಎನ್ಡಿಆರ್ಎಫ್ ನಿರಂತರ ಪ್ರಯತ್ನದ ಹೊರತಾಗಿ ಯುವತಿಯ ರಕ್ಷಣಾ ಕಾರ್ಯಕ್ಕೆ ದೊಡ್ಡ ಸಮಸ್ಯೆಯಾಗಿತ್ತು. ಇದೀಗ 34 ಗಂಟೆಗಳ ಸತತ ಕಾರ್ಯಾಚರಣೆ ಬಳಿಕವೂ ಯುವತಿಯನ್ನು ಬದುಕಿಸಲು ಸಾಧ್ಯವಾಗಿಲ್ಲ. ಎನ್ಡಿಆರ್ಎಫ್, ಬಿಎಸ್ಎಫ್, ಅಗ್ನಿ ಶಾಮಕದಳ, ಸೇನೆ ಮತ್ತು ಸ್ಥಳೀಯ ಆಡಳಿತವು ಅವರ ರಕ್ಷಣೆಗೆ ಅವಿರತ ಪ್ರಯತ್ನ ನಡೆಸಿತ್ತು. ಈ ಎಲ್ಲಾ ಪ್ರಯತ್ನ ವಿಫಲವಾಗಿದ್ದು, ಇದೀಗ ಮೃತ ಯುವತಿ ಶವವನ್ನು ಮೇಲೆತ್ತಲಾಗಿದೆ. ಕೊಳವೆ ಬಾವಿಯಲ್ಲಿ ಸಿಲುಕಿದ ಕೆಲವೇ ಗಂಟೆಯಲ್ಲಿ ಆಕೆ ಗಾಯಗೊಂಡು ಸಾವನ್ನಪ್ಪಿದ್ದು, ಆಕೆಯ ದೇಹ ಊತಗೊಂಡ ಕಾರಣ ಆಕೆಯನ್ನು ಮೇಲೆತ್ತುವುದು ಸವಾಲಾಗಿತ್ತು.
ಇನ್ನು, ಯುವತಿ ಆಕಸ್ಮಿಕವಾಗಿ ಅಥವಾ ಆತ್ಮಹತ್ಯೆ ಉದ್ದೇಶದಿಂದ ಈಕೆ ಬಿದ್ದಿದ್ದಳಾ ಎಂಬುದರ ಮರಣೋತ್ತರ ಪರೀಕ್ಷೆ ಬಳಿಕ ತಿಳಿಯಲಿದೆ. ಆಕೆಯ ಸಾವು ಕುಟುಂಬಸ್ಥರಲ್ಲಿ ಆಘಾತ ಮೂಡಿಸಿದ್ದು, ಸಾವಿನ ಸುತ್ತ ಅನುಮಾನಗಳು ಕೂಡ ಮೂಡಿವೆ.
ಇದನ್ನೂ ಓದಿ: ಹಾರಾಟದ ವೇಳೆ ಎಂಜಿನ್ ಬಂದ್; ಬೆಂಗಳೂರಿನಲ್ಲಿ ವಿಮಾನ ತುರ್ತು ಲ್ಯಾಂಡಿಂಗ್