ಕಾಸರಗೋಡು(ಕೇರಳ): ವೈನ್ ಎಂದರೆ ಸಾಮಾನ್ಯವಾಗಿ ನೆನಪಿಗೆ ಬರುವುದು ದ್ರಾಕ್ಷಿ. ಆದರೆ, ಇದೀಗ ಮಾರುಕಟ್ಟೆಯಲ್ಲಿ ಕೇವಲ ದ್ರಾಕ್ಷಿಯಲ್ಲದೇ ಗೋಡಂಬಿ ಸೇರಿದಂತೆ ತರಹೇವಾರಿ ವೈನ್ಗಳಿವೆ. ಈ ಸಾಲಿಗೆ ಹೊಸ ಸೇರ್ಪಡೆ ಎಳನೀರ ವೈನ್.
ಇದು ಅಚ್ಚರಿಯಾದರೂ ಹೌದು. ಕಲ್ಪವೃಕ್ಷದಲ್ಲಿ ದೊರೆಯುವ ಎಳನೀರಿನಿಂದ ವೈನ್ ತಯಾರಿಸಿ, ತಮ್ಮ 20 ವರ್ಷದ ಕನಸು ನನಸು ಮಾಡಿಕೊಂಡಿದ್ದಾರೆ ತಹಶೀಲ್ದಾರ್ ಆಗಿ ನಿವೃತ್ತಿ ಹೊಂದಿ ಇದೀಗ ಕೃಷಿಯಲ್ಲಿ ತೊಡಗಿರುವ ಕೇರಳದ ರೈತ ಸೆಬಾಸ್ಟಿಯನ್ ಪಿ.ಅಗಸ್ಟಿನ್.
ಭೀಮನಾಡಿನ ಸೆಬಾಸ್ಟಿಯನ್ ಪಿ.ಅಗಸ್ಟಿನ್ ಈ ಅವಿಷ್ಕಾರ ಮಾಡಿದ ರೈತರಾಗಿದ್ದು, ಇವರು ತಮ್ಮ ವಿಶೇಷ ವೈನ್ ಉತ್ಪಾದನೆಗೆ ಸುದೀರ್ಘ ಕಾನೂನು ಹೋರಾಟವನ್ನೂ ನಡೆಸಿದ್ದಾರೆ. ಇದರ ಫಲವಾಗಿ ವೈನ್ ತಯಾರಿಕೆಗಾಗಿ ಅಬಕಾರಿ ಇಲಾಖೆಯಿಂದ ಲೈಸನ್ಸ್ ಪಡೆದಿದ್ದಾರೆ.
"ಎಳನೀರಿನಿಂದ ವೈನ್ ಉತ್ಪಾದಿಸುವುದಕ್ಕೆ ಚೀನಾದ ಅಸ್ತಿತ್ವದಲ್ಲಿರುವ ಪರವಾನಗಿ ದೊಡ್ಡ ಅಡಚಣೆ ಉಂಟುಮಾಡಿತು. ನಾನು ಈ ವೈನ್ ಅನ್ನು ಎಳನೀರಿನಿಂದ ತಯಾರಿಸುತ್ತಿದ್ದೇನೆ. ಇದನ್ನು ತಯಾರಿಸುವ ವಿಧಾನದ ಕುರಿತು ಸಾಕಷ್ಟು ಪ್ರದರ್ಶನ ನೀಡಿದ್ದೇನೆ. ಹೀಗಾಗಿ ಇಲಾಖೆಯಿಂದ ಅನುಮತಿ ಪಡೆದೆ" ಎಂದು ಸೆಬಾಸ್ಟಿಯನ್ ತಿಳಿಸಿದರು. ಶೀಘ್ರದಲ್ಲೇ ಎಳನೀರಿನ ವೈನ್ ಮಾರುಕಟ್ಟೆಗೆ ಬರಲಿದೆ ಎಂದು ಇದೇ ವೇಳೆ ಹೇಳಿದರು.