ನವದೆಹಲಿ:ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ಈ ವರ್ಷದ ಜನವರಿಯಿಂದ ಏಪ್ರಿಲ್ ತಿಂಗಳ ನಡುವೆ ದೇಶದ ಜನರು 120.3 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಬಹಿರಂಗಪಡಿಸಿದೆ. ವಹಿವಾಟು, ಹೂಡಿಕೆಗಳು ಮತ್ತು ಡೇಟಿಂಗ್ ಆ್ಯಪ್ ಸೇರಿ ಎಲ್ಲಾ ವಂಚನೆಗಳಲ್ಲಿ ಒಟ್ಟು 1,776 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ ಎಂದು ಅಂಕಿಅಂಶ ಬಿಡುಗಡೆ ಮಾಡಿದೆ.
ಜನರ ಹಣವನ್ನು ಲಪಟಾಯಿಸುವ ಸೈಬರ್ ಅಪರಾಧಿಗಳಲ್ಲಿ ಶೇಕಡಾ 46 ರಷ್ಟು ಯೆಮೆನ್, ಲಾವೋಸ್ ಮತ್ತು ಕಾಂಬೋಡಿಯಾದ ಮೂಲದವರಾಗಿದ್ದಾರೆ ಎಂದು ಅದು ಹೇಳಿದೆ.
ಟ್ರೇಡಿಂಗ್ ಹಗರಣಗಳಲ್ಲಿ 1,420.48 ಕೋಟಿ ರೂಪಾಯಿ, ಹೂಡಿಕೆ ಹಗರಣದಲ್ಲಿ 222.58 ಕೋಟಿ ರೂಪಾಯಿ ಮತ್ತು ಡೇಟಿಂಗ್ ಆ್ಯಪ್ ಹಗರಣದಲ್ಲಿ 13.23 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಮ್ಯಾನ್ಮಾರ್, ಲಾವೋಸ್ ಮತ್ತು ಕಾಂಬೋಡಿಯಾದ ಸೈಬರ್ ಕಳ್ಳರು ಮೋಸದ ತಂತ್ರಗಳನ್ನು ರೂಪಿಸಿದ್ದಾರೆ. ಉದ್ಯೋಗಾವಕಾಶ ನೀಡುವುದಾಗಿ ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ವಂಚನೆ ಎಸಗಲಾಗುತ್ತಿದೆ ಎಂದು ಭಾರತೀಯ ಸೈಬರ್ ಸಮನ್ವಯ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೀವ್ ಕುಮಾರ್ ತಿಳಿಸಿದ್ದಾರೆ.
ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (NCRP) ಮಾಹಿತಿಯ ಪ್ರಕಾರ, ಈ ವರ್ಷದ ಜನವರಿ 1 ರಿಂದ ಏಪ್ರಿಲ್ 30 ರ ನಡುವೆ ಅಂದರೆ ನಾಲ್ಕು ತಿಂಗಳಲ್ಲಿ 7.4 ಲಕ್ಷ ಡಿಜಿಟಲ್ ಅರೆಸ್ಟ್ ದೂರುಗಳು ಬಂದಿವೆ. 2023ರಲ್ಲಿ 15.56 ಲಕ್ಷ ದೂರುಗಳು, 2022ರಲ್ಲಿ 9.66 ಲಕ್ಷ ಮತ್ತು 2021ರಲ್ಲಿ 4.52 ಲಕ್ಷ ದೂರುಗಳು ಬಂದಿವೆ.
ಪ್ರಧಾನಿ ಮೋದಿ ಎಚ್ಚರಿಕೆ:ಭಾನುವಾರ ಪ್ರಸಾರವಾದ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೈಬರ್ ಅಪರಾಧಗಳ ಬಗ್ಗೆ ಜಾಗರೂಕರಾಗಿರಿ ಎಂದು ಜನರಿಗೆ ಕರೆ ನೀಡಿದರು. ಸರ್ಕಾರಗಳ ಸಹಕಾರದೊಂದಿಗೆ ತನಿಖಾ ಸಂಸ್ಥೆಗಳು ಡಿಜಿಟಲ್ ಅರೆಸ್ಟ್ ವಂಚನೆಗಳನ್ನು ತಡೆಯಲು ಪ್ರಯತ್ನ ನಡೆಸುತ್ತಿವೆ ಎಂದು ಹೇಳಿದರು. ಯಾವುದೇ ತನಿಖಾ ಸಂಸ್ಥೆಗಳು ಫೋನ್ ಮತ್ತು ವಿಡಿಯೋ ಕರೆಗಳ ಮೂಲಕ ಜನರನ್ನು ವಿಚಾರಣೆ ಮಾಡುವುದಿಲ್ಲ ಎಂದು ಅವರ ಇದೇ ವೇಳೆ ತಿಳಿಸಿದ್ದರು.
ಏನಿದು ಡಿಜಿಟಲ್ ಅರೆಸ್ಟ್?:ನಿಮ್ಮ ಹೆಸರಿಗೆ ಡ್ರಗ್ಸ್, ಸುಳ್ಳು ಪಾಸ್ ಪೋರ್ಟ್, ನಿಷೇಧಿತ ವಸ್ತುಗಳು ಬಂದಿವೆ ಎಂದು ಕರೆ ಮಾಡಿದ ವ್ಯಕ್ತಿ ಹೇಳುತ್ತಾನೆ. ನೀವು ಇಲ್ಲ ಎಂದು ಹೇಳಿದರೂ, ಆತ ಕೇಳುವುದಿಲ್ಲ. ಬಳಿಕ ಕಾನೂನು ಕುಣಿಕೆಯ ಬಗ್ಗೆ ವಿವರಿಸಿ ನಿಮ್ಮನ್ನು ಹೆದರಿಸುತ್ತಾರೆ. ಬಳಿಕ ನಿಮ್ಮನ್ನು ನಂಬಿಸುತ್ತಾನೆ. ಪ್ರಕರಣ ಇತ್ಯರ್ಥಕ್ಕಾಗಿ ಹಣದ ಬೇಡಿಕೆ ಇಡುತ್ತಾರೆ. ಇದನ್ನೇ ಡಿಜಿಟಲ್ ಅರೆಸ್ಟ್ ಎನ್ನುತ್ತಾರೆ. ಹೀಗೆ ಮಾಡಲು ಡಿಜಿಟಲ್ ಕಳ್ಳರು ಸಿಬಿಐ, ಕಸ್ಟಮ್ ಮತ್ತು ಇಡಿ ಅಧಿಕಾರಿಗಳು ಎಂದು ಪೋಸು ನೀಡುತ್ತಾರೆ.
ಇದನ್ನೂ ಓದಿ:ಜಮ್ಮುವಿನಲ್ಲಿ ಮತ್ತೆ ಗುಂಡಿನ ಸದ್ದು; ಸೇನೆ - ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ