ರೇವಾ(ಮಧ್ಯ ಪ್ರದೇಶ): ರಸ್ತೆ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಯೊಬ್ಬರು ಆಸ್ಪತ್ರೆಯ ವೈದ್ಯರಲ್ಲಿ ಆತನ ವೀರ್ಯಕ್ಕೆ ಬೇಡಿಕೆಯಿಟ್ಟ ವಿಚಿತ್ರ ಘಟನೆ ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ ಈಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯ ಕೋರಿಕೆ ಕೇಳಿ ವೈದ್ಯರೇ ಕೆಲಕಾಲ ದಂಗಾಗಿದ್ದಾರೆ.
ಸಿಧಿ ಜಿಲ್ಲೆಯ ಚುರ್ಹತ್ ವಿಧಾನಸಭಾ ಕ್ಷೇತ್ರದ ನಿವಾಸಿಯಾಗಿದ್ದ ವ್ಯಕ್ತಿಯೊಬ್ಬ, ರೇವಾದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆತನ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದ್ದರಿಂದ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದವು. ಆತನನ್ನು ಆಸ್ಪತ್ರೆಗೆ ತರುವಷ್ಟರಲ್ಲಿ ಸಾವನ್ನಪ್ಪಿದ್ದ.
ಅಪಘಾತದ ಸುದ್ದಿ ತಿಳಿದು ಮೃತನ ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸಿದ್ದಾರೆ. ಇದೇ ವೇಳೆ ವೈದ್ಯರು ಮರಣೋತ್ತರ ಪರೀಕ್ಷೆ ಸಜ್ಜಾಗಿದ್ದಾರೆ. ಆದರೆ, ಇದಕ್ಕೆ ಅನುಮತಿ ನೀಡಲು ಕುಟುಂಬಸ್ಥರು ನಿರಾಕರಿಸಿದ್ದಾರೆ. ಜೊತೆಗೆ, ಮೃತನ ಪತ್ನಿ ಆಸ್ಪತ್ರೆಯ ಸಿಬ್ಬಂದಿಗೆ ವಿಚಿತ್ರವಾದ ಬೇಡಿಕೆ ಇಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸುವುದಕ್ಕೂ ಮೊದಲು ತನ್ನ ಪತಿಯಿಂದ ವೀರ್ಯವನ್ನು ಹೊರತೆಗೆಯಲು ಮನವಿ ಮಾಡಿದ್ದಾರೆ.
ಅಚ್ಚರಿಗೀಡಾದ ವೈದ್ಯರು: ಮೃತ ವ್ಯಕ್ತಿಯ ದೇಹದಿಂದ ವೀರ್ಯವನ್ನು ತೆಗೆಯಲು ಆಕೆ ಮನವಿ ಮಾಡಿದಾಗ, ಇದನ್ನು ಕೇಳಿದ ವೈದ್ಯರು ಕೆಲಕಾಲ ಅಚ್ಚರಿಗೆ ಒಳಗಾಗಿದ್ದಾರೆ. ಇದು ಸಂಕೀರ್ಣ ಪ್ರಕ್ರಿಯೆ ಮತ್ತು ಇಂತಹ ಯಾವುದೇ ನಿಯಮಗಳು ಆಸ್ಪತ್ರೆಯಲ್ಲಿಲ್ಲ ಎಂದು ಮಹಿಳೆಗೆ ತಿಳಿಹೇಳಿದ್ದಾರೆ. ಆದರೆ, ಮಹಿಳೆ ಮಾತ್ರ ತನ್ನ ಬೇಡಿಕೆಗೆ ಕಟಿಬದ್ಧಳಾಗಿದ್ದಾಳೆ. ಇದರಿಂದ ವೈದ್ಯರು ಪೇಚಿಗೆ ಬಿದ್ದಿದ್ದಾರೆ.
ತನ್ನ ಪತಿಯಿಂದಲೇ ಮಗುವನ್ನು ಹೊಂದಬೇಕು. ಹೀಗಾಗಿ, ವೀರ್ಯವನ್ನು ತೆಗೆಯಲು ಆಕೆ ಪರಿಪರಿಯಾಗಿ ಬೇಡಿದ್ದಾಳೆ. ದುರಂತ ಸಂಭವಿಸುವ ನಾಲ್ಕು ತಿಂಗಳ ಹಿಂದಷ್ಟೇ ದಂಪತಿಗೆ ವಿವಾಹವಾಗಿತ್ತು. ವೈದ್ಯರು ಗಂಟೆಗಳ ಕಾಲ ಆಕೆಯ ಮನವೊಲಿಕೆಯ ಯತ್ನ ನಡೆಸಿದ್ದಾರೆ. ಬಳಿಕ ಕುಟುಂಬಸ್ಥರು ಅಂತಿಮವಾಗಿ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಿದ್ದಾರೆ.
ವೈದ್ಯರು ಹೇಳೋದೇನು?: ಮೃತ ವ್ಯಕ್ತಿಯ ದೇಹದಿಂದ ವೀರ್ಯ ಹೊರ ತೆಗೆಯುವುದು ಕಷ್ಟಕರ ಪ್ರಯತ್ನ. ಆದಾಗ್ಯೂ, ಇಂತಹ ನಿಯಮಗಳು ಜಾರಿಯಲ್ಲಿಲ್ಲ. ಹೀಗಾಗಿ ಮಹಿಳೆಯ ಕೋರಿಕೆಯು ಮಾನ್ಯವಾಗುವುದಿಲ್ಲ. ಜೊತೆಗೆ, ವ್ಯಕ್ತಿ ಮೃತಪಟ್ಟು 48 ಗಂಟೆಯಾದ ಕಾರಣ, ವೀರ್ಯದ ಜೀವಂತಿಕೆಯೂ ಸಾಧ್ಯವಿಲ್ಲ. ಆಸ್ಪತ್ರೆಯಲ್ಲೂ ಅಂತಹ ಯಾವುದೇ ವ್ಯವಸ್ಥೆಯೂ ಹೊಂದಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ನಿಯಮಗಳೇನಿವೆ?: ಮೃತ ವ್ಯಕ್ತಿಯ ದೇಹದಿಂದ ವೀರ್ಯ ತೆಗೆಯುವ ನಿಯಮ ಭಾರತದಲ್ಲಿ ಅಸ್ತಿತ್ವದಲ್ಲಿಲ್ಲ. ಈ ಹಿಂದೆಯೂ ದೆಹಲಿಯಲ್ಲಿ ಮಹಿಳೆಯೋರ್ವಳು ಇಂಥದ್ದೇ ಬೇಡಿಕೆ ಇಟ್ಟಿದ್ದಳು. ಆದರೆ, ಇದು ನಿಯಮಬಾಹಿರವಾದ ಕಾರಣ ನಿರಾಕರಣೆಗೆ ಒಳಪಟ್ಟಿತ್ತು. ಮೃತ ವ್ಯಕ್ತಿಯಿಂದ ವೀರ್ಯ ಹೊರತೆಗೆಯುವುದು ವಿಶ್ವದ ಕೆಲ ರಾಷ್ಟ್ರಗಳಲ್ಲಿ ಜಾರಿಯಲ್ಲಿದೆ.
ಇದನ್ನೂ ಓದಿ: ಚುನಾವಣಾ ನಿಯಮಗಳ ತಿದ್ದುಪಡಿ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಕಾಂಗ್ರೆಸ್