ನವದೆಹಲಿ:ಟ್ರಾವೆಲ್ ಏಜೆಂಟ್ ಒಬ್ಬನ ವಂಚನೆಗೆ ಒಳಗಾಗಿ ಪಾಕಿಸ್ತಾನಕ್ಕೆ ಹೋಗಿದ್ದ ಭಾರತೀಯ ಮಹಿಳೆಯೊಬ್ಬರು 22 ವರ್ಷಗಳ ನಂತರ ಭಾರತಕ್ಕೆ ಮರಳಿ ಬಂದಿದ್ದಾರೆ. ಸದ್ಯ ಅನಾರೋಗ್ಯದಿಂದ ಗಾಲಿಕುರ್ಚಿಯಲ್ಲಿರುವ, ಭಾರತಕ್ಕೆ ಮರಳಿರುವ ಹಮೀದಾ ಅವರನ್ನು ವಿದೇಶಾಂಗ ಸಚಿವಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಿದ ನಂತರ, ಭಾರತೀಯ ವಲಸೆ ಮತ್ತು ಕಸ್ಟಮ್ಸ್ ಇಲಾಖೆಯು ಅವರನ್ನು ಜಿಲ್ಲಾಡಳಿತದ ಅಟ್ಟಾರಿ ತಹಶೀಲ್ದಾರ್ ಅವರಿಗೆ ವರ್ಗಾಯಿಸಿತು. ನಂತರ ಹಮೀದಾ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಅಮೃತಸರದ ಗುರುನಾನಕ್ ದೇವ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ತಾನು ಹೇಗೆ ಪಾಕಿಸ್ತಾನಕ್ಕೆ ಹೋದೆ ಎಂಬ ಬಗ್ಗೆ ಸ್ವತಃ ಹಮೀದಾ ಬಾನು ಹೇಳಿದ್ದು ಹೀಗಿದೆ: "ಟ್ರಾವೆಲ್ ಏಜೆಂಟ್ ಒಬ್ಬಾತ ನನ್ನನ್ನು ಮೋಸದಿಂದ ಪಾಕಿಸ್ತಾನಕ್ಕೆ ಕರೆದುಕೊಂಡು ಹೋದ. ನಾನು ಮತ್ತೆ ಭಾರತಕ್ಕೆ ಬರುತ್ತೇನೆ ಎಂಬ ಯಾವ ಭರವಸೆಯೂ ನನಗಿರಲಿಲ್ಲ. ಆದರೆ ಒಂದು ವರ್ಷದ ಹಿಂದೆ, ಭಾರತೀಯ ರಾಯಭಾರ ಕಚೇರಿ ನನ್ನನ್ನು ಸಂಪರ್ಕಿಸಿ ನಾನು ಹಿಂತಿರುಗಬಹುದು ಎಂದು ತಿಳಿಸಿತು. ಪಾಕಿಸ್ತಾನಕ್ಕೆ ಹೋಗುವ ಮುನ್ನ ನಾನು ಮುಂಬೈನಲ್ಲಿ ವಾಸಿಸುತ್ತಿದ್ದೆ. ಟ್ರಾವೆಲ್ ಏಜೆಂಟ್ ನನ್ನನ್ನು ಕೆಲಸಕ್ಕಾಗಿ ದುಬೈಗೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದ. ಆದರೆ ಅವರು ನನ್ನನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೈದರಾಬಾದ್ಗೆ ಕರೆದುಕೊಂಡು ಹೋಗಿದ್ದ. ನಾನು ತುಂಬಾ ಭಯಭೀತಳಾಗಿದ್ದೆ." ಎಂದರು.