ಲಾಸ್ ಏಂಜಲೀಸ್ (ಅಮೆರಿಕ): ಹಾಡುಗಾರ ಶಂಕರ್ ಮಹಾದೇವನ್ ಹಾಗೂ ಜಾಕಿರ್ ಹುಸೇನ್ ಅವರ ‘ಶಕ್ತಿ ಬ್ಯಾಂಡ್’ ಈ ಬಾರಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ‘ದಿಸ್ ಮೂಮೆಂಟ್’ ಹೆಸರಿನ ಆಲ್ಬಂಗೆ ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂ ವಿಭಾಗದಲ್ಲಿ ಪ್ರಶಸ್ತಿ ಬಂದಿದೆ.
ಸಂಗೀತ ಕ್ಷೇತ್ರದಲ್ಲಿ ಪ್ರತಿಷ್ಠಿತ ಎಂದೇ ಪರಿಗಣಿಸಲಾದ ಗ್ರ್ಯಾಮಿ ಪ್ರಶಸ್ತಿಗಳನ್ನು ಪ್ರದಾನ ಸಮಾರಂಭ ಲಾಸ್ ಏಂಜಲೀಸ್ನಲ್ಲಿ ನಡೆಯಿತು. ಭಾರತೀಯ ಸಂಗೀತ ಕಲಾವಿದರಾದ ಶಂಕರ್ ಮಹಾದೇವನ್ ಮತ್ತು ಜಾಕಿರ್ ಹುಸೇನ್ಗೆ ಈ ಬಾರಿಯ ಗ್ರ್ಯಾಮಿ ಅವಾರ್ಡ್ ಒಲಿದು ಬಂತು. ಲಾಸ್ ಏಂಜಲೀಸ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶ್ವದೆಲ್ಲೆಡೆಯ ಸಂಗೀತ ಕಲಾವಿದರ ಸಮ್ಮುಖದಲ್ಲಿ ಭಾರತದ ಸಂಗೀತ ದಿಗ್ಗಜರು ಪ್ರಶಸ್ತಿ ಪಡೆದುಕೊಂಡಿದ್ದಾರೆ.
8 ಜನರು ಈ ಹಾಡನ್ನು ಸಂಯೋಜಿಸಿದ್ದಾರೆ. ಜಾನ್ ಮೆಕ್ಲಾಫ್ಲಿನ್ (ಗಿಟಾರ್), ಜಾಕಿರ್ ಹುಸೇನ್ (ತಬಲಾ), ಶಂಕರ್ ಮಹಾದೇವನ್ (ಗಾಯಕ), ವಿ. ಸೆಲ್ವಗಣೇಶ್ (ತಾಳವಾದ್ಯ), ಗಣೇಶ್ ರಾಜಗೋಪಾಲನ್ (ಪಿಟೀಲು ವಾದಕ) 'ಶಕ್ತಿ ಬಾಂಡ್' ಅಲ್ಬಂಗಾಗಿ ಶ್ರಮಿಸಿದ್ದಾರೆ.
ಜಾಕಿರ್ ಹುಸೇನ್ಗೆ ಮೂರು ಗ್ರ್ಯಾಮಿ ಪ್ರಶಸ್ತಿ: ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಸೋಮವಾರ ನಡೆದ 66ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಸ್ತಾದ್ ಜಾಕಿರ್ ಹುಸೇನ್ ಮೂರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ತಬಲಾ ವಾದಕ ಮತ್ತು ಸಂಗೀತ ಸಂಯೋಜಕ ಉಸ್ತಾದ್ ಜಾಕಿರ್ ಹುಸೇನ್ ಅವರು 'ಪಾಷ್ಟೋ'ಗಾಗಿ 'ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ' ವಿಭಾಗದಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮುಂಬೈ ಮೂಲದ 72 ವರ್ಷದ ಸಂಗೀತಗಾರ ಉಸ್ತಾದ್ ಜಾಕಿರ್ ಹುಸೇನ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, "ಅಕಾಡೆಮಿಗೆ ಧನ್ಯವಾದಗಳು, ಈ ಎಲ್ಲ ಮಹಾನ್ ಸಂಗೀತಗಾರರಿಗೆ ಧನ್ಯವಾದಗಳು. ನಮ್ಮ ಕುಟುಂಬಗಳಿಗೆ ಧನ್ಯವಾದಗಳು, ಅವರಿಲ್ಲದೇ ನಾವು ಏನೂ ಅಲ್ಲ. ಪ್ರೀತಿ ಇಲ್ಲದೆ, ಸಂಗೀತವಿಲ್ಲದೆ, ಸಾಮರಸ್ಯವಿಲ್ಲದೆ, ನಾವು ಏನೂ ಅಲ್ಲ'' ಎಂದರು.
ಸಂಗೀತಗಾರರಾದ ಉಸ್ತಾದ್ ಜಾಕಿರ್ ಹುಸೇನ್, ಬೆಲಾ ಫ್ಲೆಕ್, ಎಡ್ಗರ್ ಮೆಯೆರ್ ಮತ್ತು ರಾಕೇಶ್ ಚೌರಾಸಿಯಾ 'ಅತ್ಯುತ್ತಮ ಸಮಕಾಲೀನ ವಾದ್ಯಗಳ ಆಲ್ಬಮ್' ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದಾರೆ. ಉಸ್ತಾದ್ ಜಾಕಿರ್ ಹುಸೇನ್ ಅವರು 'ಶಕ್ತಿ ಬ್ಯಾಂಡ್'ನ (ಜಾಝ್ ಗುಂಪಿನ) ಭಾಗವಾಗಿದ್ದಾರೆ. ಅದರ ಇತ್ತೀಚಿನ ಆಲ್ಬಮ್ 'ದಿಸ್ ಮೊಮೆಂಟ್'ಗೆ 'ಅತ್ಯುತ್ತಮ ಗ್ಲೋಬಲ್ ಮ್ಯೂಸಿಕ್ ಆಲ್ಬಮ್ ಪ್ರಶಸ್ತಿ ಒಲಿದು ಬಂದಿದೆ.
ಹುಸೇನ್ ಅವರ ಗ್ರ್ಯಾಮಿ ವಿಜಯವು ಭಾರತೀಯ ಅಭಿಮಾನಿಗಳನ್ನು ಹುರಿದುಂಬಿಸಿದೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಜಯಗಳನ್ನು ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯ ಪೋಸ್ಟ್ನಲ್ಲಿ, ಸಮಾರಂಭದಲ್ಲಿ ಭಾಗವಹಿಸಿದ್ದ ಸಂಗೀತ ಸಂಯೋಜಕ ರಿಕಿ ಕೇಜ್ ಅವರು, ''ಜಾಕಿರ್ ಹುಸೇನ್ ಮತ್ತು ಇತರ ಕಲಾವಿದರನ್ನು ಶ್ಲಾಘಿಸಿದ್ದಾರೆ. ಜೀವಂತ ದಂತಕಥೆಯಾಗಿರುವ ಉಸ್ತಾದ್ ಜಾಕಿರ್ ಹುಸೇನ್ ಅವರು ಒಂದೇ ರಾತ್ರಿಯಲ್ಲಿ ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಮಾಡಿದ್ದಾರೆ. ರಾಕೇಶ್ ಚೌರಾಸಿಯಾ ಎರಡು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮತ್ತು ಅದಕ್ಕೆ ಸಾಕ್ಷಿಯಾಗಲು ನಾನು ಆಶೀರ್ವದಿಸಿದ್ದೇನೆ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:'ವಂದನಾ ನಿರ್ಣಯ'ಕ್ಕೆ ಲೋಕಸಭೆಯಲ್ಲಿ ಪ್ರಧಾನಿ ಉತ್ತರ: ಬಿಜೆಪಿ ಸಂಸದರಿಗೆ ವಿಪ್ ಜಾರಿ