ನವದೆಹಲಿ: ಇಸ್ರೇಲ್ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ ನಡೆಸುವ ಮೂಲಕ ಇಸ್ರೇಲ್ ಹಾಗೂ ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ ಎಂದು ಮಧ್ಯ ಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಜೈಶಂಕರ್ ಕಳವಳ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸುವ ಕೆಲವೇ ಗಂಟೆಗಳ ಮೊದಲು ವಾಷಿಂಗ್ಟನ್ನಲ್ಲಿ ಥಿಂಕ್ ಟ್ಯಾಂಟ್ ಜೊತೆ ಸಂವಾದದಲ್ಲಿ, "ಲೆಬನಾನ್ನಲ್ಲಿ ಏನಾಯಿತು ಎಂಬುದರ ಬಗ್ಗೆ ಮಾತ್ರವಲ್ಲ, ಕೆಂಪು ಸಮುದ್ರದಲ್ಲಿ ಹಡಗಿನ ಮೇಲೆ ಹೌತಿಗಳ ದಾಳಿ ಸೇರಿದಂತೆ ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷದ ವಿಸ್ತರಣೆಯ ಸಾಧ್ಯತೆಯ ಬಗ್ಗೆ ಭಾರತ ಚಿಂತಿಸುತ್ತಿದೆ" ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತವು ಅಕ್ಟೋಬರ್ 7 ಅನ್ನು ಭಯೋತ್ಪಾದಕರ ದಾಳಿ ಎಂದು ಪರಿಗಣಿಸಿದೆ. ಇಸ್ರೇಲ್ ಪ್ರತಿಕ್ರಿಸುವ ಅಗತ್ಯ ಇದೆ ಎನ್ನವುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಆದರೆ, ಯಾವುದೇ ದೇಶದ ಯಾವುದೇ ರೀತಿಯ ಪ್ರತಿಕ್ರಿಯೆ ಆಗಿರಲಿ, ಅವುಗಳು ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಪರಿಗಣನೆಗೆ ತೆಗೆದುಕೊಂಡಿರಬೇಕು. ಮತ್ತು ಸಾಮಾನ್ಯ ಜನರ ಜೀವಹಾನಿ ಹಾಗೂ ಅವರ ಮೇಲಿನ ಯಾವುದೇ ಪರಿಣಾಮಗಳ ಬಗ್ಗೆ ಜಾಗರೂಕರಾಗಿರಬೇಕು ಎಂಬುದನ್ನು ನಾವು ನಂಬುತ್ತೇವೆ" ಎಂದರು.