ನವದೆಹಲಿ: ಭಾರತದಿಂದ ಸುಮಾರು 100 ಯುವಕರನ್ನು ವಂಚನೆಯಿಂದ ರಷ್ಯಾಕ್ಕೆ ಸಾಗಿಸಿ ಉಕ್ರೇನ್‌ನೊಂದಿಗೆ ಯುದ್ಧಕ್ಕೆ ಕಳುಹಿಸಲಾಗ್ತಿದೆ ಎಂಬ ಸುದ್ದಿಗೆ ಭಾರತ ಸರ್ಕಾರ ಪ್ರತಿಕ್ರಿಯಿಸಿದೆ. ಶುಕ್ರವಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಮಾತನಾಡಿ, ಕೆಲವು ಭಾರತೀಯರು ಅಲ್ಲಿನ ಸೈನಿಕರಿಗೆ ಸಹಾಯಕರಾಗಿರುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಈ ವಿಷಯದ ಬಗ್ಗೆ ಮಾಸ್ಕೋದೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
"ನಾವು ಎಲ್ಲಾ ಭಾರತೀಯ ಪ್ರಜೆಗಳಿಗೆ ಸರಿಯಾದ ಎಚ್ಚರಿಕೆಯನ್ನು ವಹಿಸಲು ಮತ್ತು ಈ ಸಂಘರ್ಷದಿಂದ ದೂರವಿರಲು ಒತ್ತಾಯಿಸುತ್ತೇವೆ" ಎಂದು ಜೈಸ್ವಾಲ್ ತಿಳಿಸಿದರು. ಅಲ್ಲಿ ಕೆಲಸ ಮಾಡುತ್ತಿರುವ ಭಾರತೀಯರನ್ನು ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ. ಆ ಸಮಯದಲ್ಲಿ ಭಾರತೀಯರು ಉಕ್ರೇನ್-ರಷ್ಯಾ ಯುದ್ಧದಿಂದ ದೂರವಿರಲು ಬಯಸಿದ್ದರು ಎಂದು ಜೈಸ್ವಾಲ್ ಹೇಳಿದ್ದಾರೆ.
ಮತ್ತೊಂದೆಡೆ, ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಈಗಾಗಲೇ ಈ ವಿಷಯವನ್ನು ವಿದೇಶಾಂಗ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಲ್ಲಾಳಿಗಳಿಂದ ವಂಚನೆಗೊಂಡು 12 ಮಂದಿ ಯುವಕರು ರಷ್ಯಾಕ್ಕೆ ಹೋಗಿದ್ದಾರೆ. ಇವರಲ್ಲಿ ಇಬ್ಬರು ತೆಲಂಗಾಣ ಮೂಲದವರು ಎನ್ನಲಾಗಿದೆ. ಉಳಿದವರು ಕರ್ನಾಟಕ, ಗುಜರಾತ್, ಕಾಶ್ಮೀರ ಮತ್ತು ಯುಪಿಯಿಂದ ಬಂದವರು. ಇವರೆಲ್ಲರಿಗೂ ರಷ್ಯಾದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ಏಜೆಂಟರು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತರ ಕುಟುಂಬಗಳು ದೂರು ನೀಡಿದ್ದರಿಂದ ಸಚಿವ ಜೈಶಂಕರ್ ಹಾಗೂ ರಷ್ಯಾದಲ್ಲಿರುವ ಭಾರತೀಯ ರಾಯಭಾರಿಗೂ ಪತ್ರ ಬರೆದಿದ್ದೇನೆ ಎಂದು ಹೇಳಿದರು.