ಅಮರಾವತಿ(ಮಹಾರಾಷ್ಟ್ರ): ನರೇಂದ್ರ ಮೋದಿ ಸರ್ಕಾರ ಹತ್ತು ವರ್ಷಗಳಲ್ಲಿ 16 ಲಕ್ಷ ಕೋಟಿ ರೂಪಾಯಿಗಳ ಸಾಲ ಮನ್ನಾದಿಂದಾಗಿ ಕೇವಲ 22ರಿಂದ 25 ಜನ ಮಾತ್ರ ಕೋಟ್ಯಾಧಿಪತಿಗಳಾಗಿದ್ದಾರೆ. ಆದರೆ, 'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕೋಟ್ಯಾಂತರ ಜನರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಆದ್ಯತೆಯ ಮೇರೆಗೆ ಜಾತಿ ಗಣತಿ ಮತ್ತು ಆರ್ಥಿಕ ಸಮೀಕ್ಷೆ ನಡೆಸಲಾಗುವುದು ಮತ್ತು ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ ರಾಹುಲ್, ಮೋದಿ ಕೇವಲ ತಮ್ಮ 22 ಕೈಗಾರಿಕೋದ್ಯಮಿ ಸ್ನೇಹಿತರಿಗೆ ಸಹಾಯ ಮಾಡಿದ್ದಾರೆ. ಸಾಮಾನ್ಯ ಜನರಿಗೆ ಏನೂ ಮಾಡಿಲ್ಲ. 22 ಕೈಗಾರಿಕೋದ್ಯಮಿ ಸ್ನೇಹಿತರ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿರುವ ಮೋದಿಯವರು ಬಡವರು, ವಿದ್ಯಾರ್ಥಿಗಳು ಮತ್ತು ರೈತರ ಎಷ್ಟು ಸಾಲ ಮನ್ನಾ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಮಹಾಲಕ್ಷ್ಮಿ ಯೋಜನೆ ಮತ್ತು ವಿದ್ಯಾರ್ಥಿಗಳಿಗೆ ಶಿಷ್ಯವೃತ್ತಿಯ ಹಕ್ಕನ್ನು ನೀಡಿದೆ. ಮಹಾಲಕ್ಷ್ಮಿ ಯೋಜನೆಯಡಿ ಬಡ ಮಹಿಳೆಯರಿಗೆ ಪ್ರತಿ ವರ್ಷ 1 ಲಕ್ಷ ನೀಡುವ ಗುರಿ ಇದೆ. ಶಿಷ್ಯವೇತನದ ಹಕ್ಕಿನಡಿ ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಅಪ್ರೆಂಟಿಸ್‌ಗಳಾಗಿ ಒಂದು ವರ್ಷದ ಉದ್ಯೋಗವನ್ನು ಪಡೆಯಲು ಮತ್ತು ಅವರ ಬ್ಯಾಂಕ್ ಖಾತೆಗಳಿಗೆ 1 ಲಕ್ಷ ರೂಪಾಯಿ ನೆರವು ಕಲ್ಪಿಸಲಾಗುತ್ತದೆ. ಇದು ದೇಶದ ಚಿತ್ರಣವನ್ನೇ ಬದಲಿಸಿದೆ. ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಮುಗಿದ ನಂತರ ಭಾರತವು ತರಬೇತಿ ಪಡೆದ ಮತ್ತು ನುರಿತ ಉದ್ಯೋಗಿಗಳನ್ನು ಹೊಂದಿದ ರಾಷ್ಟ್ರವಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ:2ನೇ ಹಂತದ ಲೋಕಸಭಾ ಚುನಾವಣೆಗೆ ದೇಶ ಸಜ್ಜು; ಪ್ರತಿಷ್ಠಿತ ಕ್ಷೇತ್ರ, ಘಟಾನುಘಟಿಗಳ ಮಾಹಿತಿ ಸೇರಿ ಸಂಪೂರ್ಣ ವಿವರ