ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯು ಶನಿವಾರ ಒಡಿಶಾ ಕಡಲ ತೀರದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ದ್ವೀಪದಿಂದ ಮೊದಲ 'ಲಾಂಗ್ ರೇಂಜ್ ಹೈಪರ್‌ಸಾನಿಕ್ ಕ್ಷಿಪಣಿ'ಯ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿತು.
ಹೈಪರ್‌ಸಾನಿಕ್ ಕ್ಷಿಪಣಿಯನ್ನು 1,500 ಕಿ.ಮೀ.ಗೂ ಹೆಚ್ಚು ದೂರ ಹಲವು ಪೇಲೋಡ್‌ಗಳನ್ನು ಹೊತ್ತೊಯ್ಯಲು ಅನುವಾಗುವಂತೆ ವಿನ್ಯಾಸ ಮಾಡಲಾಗಿದೆ. ಇದು ಭಾರತದ ಎಲ್ಲ ಸೇನಾಪಡೆಗಳ ನೆರವಿಗೆ ಬರಲಿದೆ.
ಕ್ಷಿಪಣಿ ಉಡಾಯಿಸಿದ ಬಳಿಕ ವಿವಿಧೆಡೆ ನಿಯೋಜಿಸಲಾದ ರೇಂಜ್ ಸಿಸ್ಟಂಗಳ ಮೂಲಕ ಅದನ್ನು ಸೂಕ್ಷ್ಮವಾಗಿ ಗಮನಿಸಲಾಗಿದೆ. ಹಾರಾಟದ ದತ್ತಾಂಶಗಳನ್ನು ಡೌನ್‌ರೇಂಜ್ ಶಿಪ್ ಸ್ಟೇಷನ್‌ಗಳ ಮೂಲಕ ಸಂಗ್ರಹಿಸಲಾಗಿದ್ದು, ನಿಖರತೆ ಮತ್ತು ಪೂರ್ವಯೋಜನೆಯಂತೆಯೇ ವಿವಿಧ ಚಲನೆಗಳು ಯಶಸ್ವಿಯಾಗಿವೆ ಎಂದು ದೃಢಪಡಿಸಲಾಗಿದೆ.
ಕ್ಷಿಪಣಿಯನ್ನು ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಮಿಸೈಲ್ ಕಾಂಪ್ಲೆಕ್ಸ್ ಹೈದರಾಬಾದ್‌ನಲ್ಲಿರುವ ಪ್ರಯೋಗಾಲಯಗಳು ಮತ್ತು ಡಿಆರ್‌ಡಿಒದ ವಿವಿಧ ಪ್ರಯೋಗಾಲಯಗಳು ಹಾಗು ಇತರೆ ಕೈಗಾರಿಕಾ ಪಾಲುದಾರರ ಜೊತೆಗೂಡಿ ಸ್ವದೇಶಿಯವಾಗಿ ಅಭಿವೃದ್ಧಿಪಡಿಸಲಾಗಿತ್ತು. ಉಡ್ಡಯನದ ವೇಳೆ ಡಿಆರ್‌ಡಿಒದ ಹಿರಿಯ ವಿಜ್ಞಾನಿಗಳು ಮತ್ತು ಸೇನಾಪಡೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ದೇಶದ ಮೊದಲ ಲಾಂಗ್ ರೇಂಜ್ ಹೈಪರ್‌ಸಾನಿಕ್ ಯೋಜನೆಯ ಪರೀಕ್ಷಾರ್ಥ ಹಾರಾಟ ಯಶಸ್ವಿಯಾದ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್‌ಡಿಒ, ಸೇನಾಪಡೆಗಳು ಮತ್ತು ವಿವಿಧ ಕೈಗಾರಿಕಾ ಪಾಲುದಾರರನ್ನು ಅಭಿನಂದಿಸಿದ್ದಾರೆ.
ಈ ಕುರಿತು ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಚ್ ಮಾಡಿರುವ ಅವರು, "ಇದೊಂದು ಐತಿಹಾಸಿಕ ಕಾರ್ಯಕ್ರಮ. ಇದರೊಂದಿಗೆ ಭಾರತ ಸಂಕೀರ್ಣ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವಿರುವ ಕೆಲವೇ ದೇಶಗಳ ಪಟ್ಟಿ ಸೇರಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪಿನಾಕಾ ವೆಪನ್ ಸಿಸ್ಟಮ್ ಪರೀಕ್ಷೆ ಯಶಸ್ವಿ: ಡಿಆರ್‌ಡಿಒ ಮತ್ತೊಂದು ಸಾಧನೆ