ನವದೆಹಲಿ:ಜಾಗತಿಕವಾಗಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ, ವಿಶ್ವದ ಹಲವು ರಾಷ್ಟ್ರಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿರುವ ಇಸ್ಲಾಮಿಕ್ ಸಂಘಟನೆಯಾದ ಹಿಜ್ಬ್ ಉತ್ ತಹ್ರೀರ್ (HuT) ಅನ್ನು ಕೇಂದ್ರ ಸರ್ಕಾರ ಉಗ್ರ ಸಂಘಟನೆ ಎಂದು ಘೋಷಿಸಿ, ನಿಷೇಧ ಹೇರಿದೆ.
ಐಸಿಸ್ ಪ್ರೇರಿತ ಸಂಘಟನೆಯ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ನಿಷೇಧ ಹೇರಿ ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಯುವಕರನ್ನು ಐಸಿಸ್‌ನಂತಹ ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ಪ್ರೇರೇಪಣೆ, ಭಯೋತ್ಪಾದಕ ಚಟುವಟಿಕೆಗಳಿಗೆ ನಿಧಿ ಸಂಗ್ರಹ ಕಾರ್ಯದಲ್ಲಿ ತೊಡಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
HuT ಸಂಘಟನೆಯು ಜಿಹಾದ್ ಮತ್ತು ಭಯೋತ್ಪಾದಕ ಚಟುವಟಿಕೆಗಳ ಮೂಲಕ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳನ್ನು ಉರುಳಿಸುವ ಸಂಚು ನಡೆಸುತ್ತದೆ. ಇದು ಭಾರತ ಸೇರಿದಂತೆ ಜಾಗತಿಕವಾಗಿ ಇಸ್ಲಾಮಿಕ್ ರಾಜ್ಯ ಮತ್ತು ಕ್ಯಾಲಿಫೇಟ್ ಅನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಆಂತರಿಕ ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ ಎಂದು ಹೇಳಿದೆ.
ಹಿಜ್ಬ್-ಉತ್-ತಹ್ರೀರ್ ಭಯೋತ್ಪಾದನೆಯಲ್ಲಿ ತೊಡಗಿದ್ದು, ದೇಶದಲ್ಲಿ ವಿವಿಧ ಉಗ್ರ ಕೃತ್ಯಗಳಲ್ಲಿ ಭಾಗವಹಿಸಿದೆ. ಭದ್ರತೆಗೆ ಅಪಾಯಕಾರಿಯಾಗಿರುವ ಸಂಘಟನೆಯನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ ನಿಷೇಧಿತ ಸಂಘಟನೆ ಎಂದು ಘೋಷಿಸಲಾಗುತ್ತಿದೆ ಎಂದು ಕೇಂದ್ರ ತಿಳಿಸಿದೆ.
1953ರಲ್ಲಿ ಸ್ಥಾಪನೆಯಾದ HuT ಇಸ್ಲಾಮಿಕ್ ಸಂಘಟನೆಯ ಪ್ರಧಾನ ಕಚೇರಿಯು ಲೆಬನಾನ್‌ನಲ್ಲಿದೆ. ಇದು ಇಂಗ್ಲೆಂಡ್, ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಕನಿಷ್ಠ 30 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಸ್ರೇಲ್ ಮೇಲಿನ ದಾಳಿಯನ್ನು ಇದು ಸಂಭ್ರಮಿಸುತ್ತಿದೆ. ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿರುವ HuT ಸಂಘಟನೆಯನ್ನು ಜರ್ಮನಿ, ಈಜಿಪ್ಟ್, ಇಂಗ್ಲೆಂಡ್ ಮತ್ತು ಹಲವಾರು ಮಧ್ಯ ಏಷ್ಯಾ ಮತ್ತು ಅರಬ್ ದೇಶಗಳು ನಿಷೇಧ ಹೇರಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಚೇರಿಯ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, 'ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತಾ ನೀತಿಯನ್ನು ಹೊಂದಿದ್ದು, ಹಿಜ್ಬ್-ಉತ್-ತಹ್ರೀರ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲಾಗಿದೆ' ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ಜಮ್ಮು-ಕಾಶ್ಮೀರ ವಿಧಾನಸಭೆಗೆ ಆಯ್ಕೆಯಾದ 90 ಶಾಸಕರ ಪೈಕಿ 76 ಮಂದಿ ಕೋಟ್ಯಧಿಪತಿಗಳು