ನವದೆಹಲಿ:ಭಾರತ ಪ್ರವಾಸದಲ್ಲಿರುವ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದು, ಉಭಯ ದೇಶಗಳ ನಡುವೆ ಪ್ರಮುಖ ಒಡಂಬಡಿಕೆಗಳಿಗೆ ಸಹಿ ಬಿದ್ದಿದೆ.
ಬಳಿಕ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಶ್ರೀಲಂಕಾದ ಅಭಿವೃದ್ಧಿಗೆ ಭಾರತದ ಬೆಂಬಲ ದೃಢವಾಗಿದೆ. ಇದುವರೆಗೆ ನಾವು 5 ಬಿಲಿಯನ್ ಡಾಲರ್ ಸಾಲ ನೀಡಿದ್ದೇವೆ. ಭಾರತದ ಸಹಾಯದಿಂದ ಮಹೊ-ಅನುರಧಾಪುರ ರೈಲ್ವೆ ಸಿಗ್ನಲಿಂಗ್ ವ್ಯವಸ್ಥೆ ಮತ್ತು ಕಂಕಸತುರೈ ಬಂದರಿನ ಪುನರ್ವಸತಿ ಕೆಲಸ ನಡೆಯಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ಶ್ರೀಲಂಕಾದ ಜೊತೆಗೆ ಭಾರತದ ಅಭಿವೃದ್ಧಿ ಸಹಕಾರದ ಹೊಸ ಉಪಕ್ರಮಗಳ ಕುರಿತು ಮುಂದುವರೆದು ಮಾಹಿತಿ ನೀಡಿದ ಪ್ರಧಾನಿ, ಮುಂದಿನ ಐದು ವರ್ಷ ಜಾಫ್ನಾ ಯುನಿವರ್ಸಿಟಿ ಮತ್ತು ಪೂರ್ವ ಪ್ರಾಂತ್ಯದಲ್ಲಿ 200 ವಿದ್ಯಾರ್ಥಿಗಳಿಗೆ ಮಾಸಿಕ ಸ್ಕಾಲರ್ಶಿಪ್ ನೀಡಲಾಗುವುದು. ಹಾಗೆಯೇ ಮುಂದಿನ ಐದು ವರ್ಷ ಶ್ರೀಲಂಕಾದ 1,500 ನಾಗರಿಕ ಸೇವಾದಾರರಿಗೆ ಭಾರತದಲ್ಲಿ ತರಬೇತಿ ನೀಡಲಾಗುವುದು ಎಂದರು.