ಕರ್ನಾಟಕ

karnataka

ETV Bharat / bharat

'I.N.D.I.A ಮೈತ್ರಿಕೂಟ ಶಾಶ್ವತ': ಪುತ್ರ ಒಮರ್​ ಮಾತಿಗೆ ಅಪ್ಪ ಫಾರೂಕ್​ ಬ್ರೇಕ್​ - FAROOQ ABDULLAH

ವಿಪಕ್ಷಗಳ I.N.D.I.A ಮೈತ್ರಿಕೂಟದ ಅಸ್ತಿತ್ವದ ಪ್ರಶ್ನೆ ಎದ್ದಿದೆ. ಸಿಎಂ ಒಮರ್​ ಅಬ್ದುಲ್ಲಾ ಕೂಟ ವಿಸರ್ಜಿಸಲು ಸಲಹೆ ನೀಡಿದ್ದರೆ, ಅವರ ತಂದೆ ಫಾರೂಕ್​ ಅಬ್ದುಲ್ಲಾ ಮೈತ್ರಿ ಶಾಶ್ವತ ಎಂದಿದ್ದಾರೆ.

ಫಾರೂಕ್ ಅಬ್ದುಲ್ಲಾ, ಒಮರ್​ ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ, ಒಮರ್​ ಅಬ್ದುಲ್ಲಾ (ANI)

By PTI

Published : 17 hours ago

ಜಮ್ಮು:ಲೋಕಸಭೆ ಚುನಾವಣೆಗಾಗಿ ಮಾತ್ರ ವಿಪಕ್ಷಗಳ I.N.D.I.A ಮೈತ್ರಿಕೂಟವನ್ನು ರಚಿಸಿದ್ದರೆ, ಅದನ್ನು ಬರ್ಖಾಸ್ತು ಮಾಡಿ ಎಂದು ಹೇಳಿರುವ ಜಮ್ಮು- ಕಾಶ್ಮೀರ ಸಿಎಂ ಒಮರ್​ ಅಬ್ದುಲ್ಲಾ ಹೇಳಿಕೆಯನ್ನು ಅವರ ತಂದೆ ಫಾರೂಕ್​ ಅಬ್ದುಲ್ಲಾ ಅಲ್ಲಗಳೆದಿದ್ದಾರೆ.

"ಇಂಡಿಯಾ ಮೈತ್ರಿಕೂಟ ಶಾಶ್ವತ ಮತ್ತು ಚಲನಶೀಲ. ಅದನ್ನು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ರಚಿಸಲಾಗಿಲ್ಲ. ಬದಲಿಗೆ ಭಾರತದ ಅಭಿವೃದ್ಧಿ ಮತ್ತು ಬಲವರ್ಧನೆಗಾಗಿ ರೂಪಿಸಲಾಗಿದೆ. ಹೀಗಾಗಿ ಅದನ್ನು ವಿಸರ್ಜಿಸುವ ಪ್ರಶ್ನೆಯೇ ಇಲ್ಲ" ಎಂದು ನ್ಯಾಷನಲ್​ ಕಾಂಗ್ರೆಸ್​ (ಎನ್​ಸಿ) ಪಕ್ಷದ ಮುಖ್ಯಸ್ಥ ಫಾರೂಕ್​ ಅಬ್ದುಲ್ಲಾ ಹೇಳಿದ್ದಾರೆ.

ಇಂಡಿಯಾ ಕೂಟದಲ್ಲಿ ಕೇಳಿಬರುತ್ತಿರುವ ಗೊಣಗಾಟಗಳ ಕುರಿತು ಮಾತನಾಡಿದ ಅವರು, "ಲೋಕಸಭೆ ಚುನಾವಣೆಗಾಗಿ ಮಾತ್ರ ಈ ಕೂಟವನ್ನು ಸ್ಥಾಪಿಸಲಾಗಿಲ್ಲ. ಹಾಗೆ ಅಂದುಕೊಂಡವರಿಗೆ ತಪ್ಪು ಭಾವನೆ ಇದೆ. ಈ ಮೈತ್ರಿಯು ಪ್ರತಿ ದಿನ, ಪ್ರತಿ ಕ್ಷಣವೂ ಜೀವಂತವಾಗಿರುತ್ತದೆ. ದೇಶದಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ತೊಡೆದು ಹಾಕುವುದು ಕೂಟದ ಮುಖ್ಯ ಧ್ಯೇಯವಾಗಿದೆ" ಎಂದರು.

ಓದಿ: ಕಾಂಗ್ರೆಸ್ EVM ದೂಷಿಸುವುದನ್ನು ಬಿಟ್ಟು ಫಲಿತಾಂಶ ಒಪ್ಪಿಕೊಳ್ಳಲಿ: ಸಿಎಂ ಒಮರ್ ಅಬ್ದುಲ್ಲಾ

ಕೂಟದಲ್ಲಿನ ಏಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, "ಕೂಟದ ನಾಯಕತ್ವ ಮತ್ತು ಏಕತೆಯ ಬಗ್ಗೆ ಚರ್ಚೆ ನಡೆಯಬೇಕಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಉತ್ತರ ಹುಡುಕಲಿದ್ದೇವೆ. ಕೂಟವನ್ನು ವಿಸರ್ಜಿಸುವ ಹೇಳಿಕೆಗಳ ಬಗ್ಗೆ ಹೆಚ್ಚಿನ ಚರ್ಚೆ ಬೇಡ. ಬಣ ಎಂದಿಗೂ ಶಾಶ್ವತವಾಗಿರಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರದ ಜೊತೆಗೆ ಗುದ್ದಾಟವಿಲ್ಲ:ಇನ್ನು, "ಕೇಂದ್ರ ಸರ್ಕಾರದ ಜೊತೆಗೆ ಜಮ್ಮು- ಕಾಶ್ಮೀರ ಸರ್ಕಾರ ಗುದ್ದಾಟ ನಡೆಸುತ್ತಿಲ್ಲ. ಇಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತ ಸರ್ಕಾರದ ನೆರವು ಕೋರಿದ್ದೇವೆ. ಹಾಗಂತ ನಾವು ಬಿಜೆಪಿ ಜೊತೆಗಿದ್ದೇವೆ ಎಂದರ್ಥವಲ್ಲ. ಕೇಂದ್ರವೂ ಕಣಿವೆಯ ಅಭಿವೃದ್ಧಿಗಾಗಿ ಸಹಾಯ ಮಾಡಬೇಕು" ಎಂದು ಕೋರಿದರು.

ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕೇಂದ್ರದ ಜೊತೆಗೆ ಗುರುತಿಸಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗೆ, "ತಮ್ಮ ಪುತ್ರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾರನ್ನು ಜಮ್ಮು- ಕಾಶ್ಮೀರದ ಜನರು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ದೆಹಲಿಯ ಸೂಚನೆಯಂತೆ ಕಾರ್ಯನಿರ್ವಹಿಸುವುದಿಲ್ಲ. ಅವರಿಗೆ ತಮ್ಮದೇ ಆದ ನಿರ್ಧಾರಗಳಿವೆ. ದಿಲ್ಲಿ ನಾಯಕರ ಜೊತೆಗಿದ್ದಾರೆ ಎಂಬುದು ತಪ್ಪು ತಿಳಿವಳಿಕೆ" ಎಂದರು.

ಸಿಎಂ ಒಮರ್​​ ಹೇಳಿದ್ದೇನು?ಇಂಡಿಯಾ ಕೂಟದಲ್ಲಿರುವ ಆಮ್​​ ಆದ್ಮಿ ಪಕ್ಷ (ಆಪ್​) ಮತ್ತು ಕಾಂಗ್ರೆಸ್​ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿರುವುದಕ್ಕೆ ಜಮ್ಮು- ಕಾಶ್ಮೀರ ಸಿಎಂ ಒಮರ್​ ಅಬ್ದುಲ್ಲಾ ಅಸಮಾಧಾನ ವ್ಯಕ್ತಪಡಿಸಿದ್ದರು. "ಕೂಟದ ನೇತೃತ್ವ ವಹಿಸಿರುವ ಕಾಂಗ್ರೆಸ್​​, ಆಪ್​ ವಿರುದ್ಧ ತೊಡೆತಟ್ಟಿದೆ. ಹೀಗಾಗಿ, ಇಂಡಿಯಾ ಕೂಟಕ್ಕೆ ಯಾವ ಬೆಲೆ ಇದೆ. ಕೂಟವನ್ನು ವಿಸರ್ಜಿಸುವುದು ಮೇಲು" ಎಂದಿದ್ದರು.

ಇದನ್ನೂ ಓದಿ:'ಐಎನ್​ಡಿಐಎ' ಮೈತ್ರಿಕೂಟ ಮುಚ್ಚುವುದೊಳಿತು: ಸಿಎಂ ಒಮರ್ ಅಬ್ದುಲ್ಲಾ

ABOUT THE AUTHOR

...view details