ಚೆನ್ನೈ/ಕೃಷ್ಣಗಿರಿ (ತಮಿಳುನಾಡು):ಕರ್ನಾಟಕದ ಬೆಂಗಳೂರಿನ ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್ ಅವರ ಆಪ್ತ ಸಹಾಯಕರ (ಪಿಎ) ಸಂಬಂಧಿ ಮನೆ ಮೇಲೆ ತಮಿಳುನಾಡಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿರುವ ಲೋಕೇಶ್ ಕುಮಾರ್ ಎಂಬುವರ ಮನೆ ಮೇಲೆ ಈ ದಾಳಿ ಮಾಡಲಾಗಿದ್ದು, 100 ಪವನ್ ಚಿನ್ನಾಭರಣ ಮತ್ತು 1.20 ಕೋಟಿ ರೂಪಾಯಿ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಲೋಕೇಶ್ ಕುಮಾರ್ ಎಸ್ಎಬಿಎಲ್ ಬ್ಲೂ ಮೆಟಲ್ ಎಂಬ ಕ್ರಷರ್ ಕಾರ್ಖಾನೆ ನಡೆಸುತ್ತಿದ್ದಾರೆ. ಮಾರ್ಚ್ 28ರಂದು ಬೆಂಗಳೂರಿನಿಂದ ಹೊಸೂರಿಗೆ ತೆರಳುತ್ತಿದ್ದಾಗ ಚುನಾವಣಾ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ ಇವರ ಕಾರಿನ ಮೇಲೆ ದಾಳಿ ನಡೆಸಿದ್ದರು. ಆ ವೇಳೆ ಈತನಿಂದ 10 ಲಕ್ಷ ರೂ. ಪತ್ತೆ ಮಾಡಿ ವಶಕ್ಕೆ ಪಡೆದಿದ್ದರು. ಬಳಿಕ ಅಧಿಕಾರಿಗಳು ಹಣದ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಿದ್ದರು.