ಮುಂಬೈ/ಮೀರತ್: ಉತ್ತರ ಪ್ರದೇಶದ ಮೀರತ್‌ನಲ್ಲಿ ಲೋಕಸಭೆ ಚುನಾವಣೆಗೆ ಮತದಾನ ಮುಗಿದ ಒಂದೇ ದಿನದಲ್ಲಿ ಮೀರತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ 'ರಾಮಾಯಣ' ಧಾರವಾಹಿಯ ನಟ ಅರುಣ್ ಗೋವಿಲ್ ಮುಂಬೈಗೆ ಆಗಮಿಸಿದ್ದಾರೆ. ಏಕಾಏಕಿ ಕ್ಷೇತ್ರ ಬಿಟ್ಟು ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ, ಸ್ವತಃ ಅರುಣ್ ಗೋವಿಲ್ ಈ ಬಗ್ಗೆ ಪ್ರತಿಕ್ರಿಯಿಸಿ, ಚುನಾವಣಾ ಪ್ರಚಾರಕ್ಕಾಗಿ ಪಕ್ಷದ ಸೂಚನೆಯ ಮೇರೆಗೆ ಮುಂಬೈಗೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ಮತದಾರರು, ಸಹೋದರಿಯರು, ಸಹೋದರರು ಮತ್ತು ಮೀರತ್‌ನ ಕಾರ್ಯಕರ್ತರೇ, ಮಾರ್ಚ್ 24ರ ಹೋಳಿ ಹಬ್ಬದಂದು ಮಾರ್ಚ್ 24ರಂದು ಭಾರತೀಯ ಜನತಾ ಪಕ್ಷವು ಚುನಾವಣೆಗೆ ನನ್ನ ಹೆಸರನ್ನು ಘೋಷಿಸಿತ್ತು. ಪಕ್ಷದ ಸೂಚನೆಯ ಮೇರೆಗೆ ನಾನು ಮಾರ್ಚ್ 26ರಂದು ನಿಮ್ಮ ಮಧ್ಯೆ ಬಂದಿದ್ದೆ. ಒಂದು ತಿಂಗಳ ಕಾಲ ನಿಮ್ಮೊಂದಿಗೆ ಇದ್ದು, ನಿಮ್ಮ ಬೆಂಬಲದೊಂದಿಗೆ ಚುನಾವಣಾ ಪ್ರಚಾರ ಮಾಡಿದ್ದೇನೆ. ಚುನಾವಣೆ ಪೂರ್ಣಗೊಂಡಿದೆ. ನಿಮ್ಮ ಪ್ರೀತಿ, ಬೆಂಬಲ ಮತ್ತು ಗೌರವಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಮೀರತ್ ಬಿಜೆಪಿ ಅಭ್ಯರ್ಥಿ ಗೋವಿಲ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈಗ ಪಕ್ಷದ ಸೂಚನೆ ಮೇರೆಗೆ ನನ್ನ ಜವಾಬ್ದಾರಿಯನ್ನು ನಿಭಾಯಿಸಲು ಮುಂಬೈನಲ್ಲಿದ್ದೇನೆ. ಚುನಾವಣಾ ಪ್ರಚಾರಕ್ಕಾಗಿ ನನ್ನನ್ನು ಬೇರೆ ಪ್ರದೇಶಗಳಿಗೆ ಕಳುಹಿಸಲು ಪಕ್ಷವು ಯೋಜಿಸುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ, ನಾನು ನಿಮ್ಮ ನಡುವೆ ಮತ್ತೆ ಇರುತ್ತೇನೆ. ಮೀರತ್‌ನ ಜನರು ಮತ್ತು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರೊಂದಿಗೆ ನರೇಂದ್ರ ಮೋದಿ ನೇತೃತ್ವದಲ್ಲಿ ಮೀರತ್ಅನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನಗಳನ್ನು ಪ್ರಾರಂಭಿಸುತ್ತೇನೆ ಎಂದು 66 ವರ್ಷದ ನಟ ತಿಳಿಸಿದ್ದಾರೆ.